ಕಾರವಾರ: ಉತ್ತರಕನ್ನಡ ಜಿಲ್ಲೆಯಾದ್ಯಂತ ಎಡಬಿಡದೆ ಮಳೆಯಾಗುತ್ತಿದೆ. ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿರುವ ಕಾರಣ ನದಿ ತೀರದ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಕೆಲ ಮನೆಗಳಿಗೆ ನೀರು ನುಗ್ಗಿ ಪ್ರವಾಹದ ಭೀತಿ ಎದುರಾಗಿದೆ.
ಗಾಳಿ ಸಹಿತ ಮಳೆ ಆರ್ಭಟ ಮುಂದುವರಿದಿದ್ದು, ಗಂಗಾವಳಿ, ಅಘನಾಶಿನಿ, ಶರಾವತಿ ನದಿಗಳು ತುಂಬಿ ಹರಿಯಲಾರಂಭಿಸಿವೆ. ಕಾರವಾರ ತಾಲೂಕಿನ ಅರಗಾ, ಬಿಣಗಾ ಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದುಬಂದಿದ್ದು, ಜನವಸತಿ ಪ್ರದೇಶಗಳು ಕೆರೆಯಂತಾಗಿವೆ. ಅದರಲ್ಲೂ ಹೆದ್ದಾರಿಗೆ ಹೊಂದಿಕೊಂಡಿರುವ ಭಾಗಗಳಲ್ಲೇ ಭಾರಿ ಪ್ರಮಾಣದಲ್ಲಿ ನೀರು ಬಂದಿದ್ದು, ನೀರು ಹರಿದು ಹೋಗಲು ಮಾರ್ಗವಿಲ್ಲದೇ ಮನೆಗಳಿಗೆ ನುಗ್ಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅರಗಾ, ಬಿಣಗಾ ಭಾಗದಲ್ಲಿ ಸುಮಾರು 30 ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿದ್ದ ದಿನಬಳಕೆ ವಸ್ತುಗಳು ನೀರುಪಾಲಾಗಿವೆ. ಮಳೆ ಮುಂದುವರಿದಿದ್ದು, ಮನೆಗಳ ಬಳಿ ನೀರಿನ ಮಟ್ಟ ಏರುತ್ತಲೇ ಇದೆ.
ಜಿಲ್ಲೆಯಲ್ಲಿ ಹೆದ್ದಾರಿ ಅಗಲೀಕರಣ ಜವಾಬ್ದಾರಿ ಹೊತ್ತಿರುವ ಐಆರ್‌ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿಯೇ ಮಳೆಯ ನೀರು ಜನವಸತಿ ಪ್ರದೇಶಕ್ಕೆ ನುಗ್ಗುತ್ತಿದೆ. ಮಳೆ ನೀರು ಹರಿದು ಹೋಗಲು ಕಾಲುವೆ ಇಲ್ಲದಿದ್ದರಿಂದಲೇ ಕೃತಕ ನೆರೆ ಸೃಷ್ಟಿಯಾಗಿದೆ ಅಂತಾ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಸುರಿದಿದ್ದ ಮಳೆಯ ಸಂದರ್ಭದಲ್ಲೂ ಸಹ ಅರಗಾ ಭಾಗದಲ್ಲಿ ಹೆದ್ದಾರಿಯಂಚಿನ ಮನೆಗಳಿಗೆ ನೀರು ನುಗ್ಗಿತ್ತು. ಐಆರ್‌ಬಿ ಕಂಪನಿ ಹೆದ್ದಾರಿ ಇಕ್ಕೆಲಗಳಲ್ಲಿ ಸೂಕ್ತ ಕಾಲುವೆ ನಿರ್ಮಿಸದೇ ಮಳೆ ನೀರು ಹರಿದು ಹೋಗುವ ಪೈಪ್‌ಗಳನ್ನು ಬೇಕಾಬಿಟ್ಟಿಯಾಗಿ ಅಳವಡಿಸಿತ್ತು ಎಂಬ ಆರೋಪ ಕೇಳಿಬಂದಿದೆ. ಪರಿಣಾಮ ಮಳೆಯ ನೀರು ಸರಾಗವಾಗಿ ಹರಿದುಹೋಗದೇ ಹೆದ್ದಾರಿ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿತ್ತು. ಈ ವೇಳೆಯೇ ಅಲ್ಲಿನ ನಿವಾಸಿಗಳು ಸೂಕ್ತ ಕಾಲುವೆಗಳನ್ನು ನಿರ್ಮಿಸುವಂತೆ ಆಗ್ರಹಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಇದೀಗ ಮತ್ತೆ ನೆರೆ ಸೃಷ್ಟಿಯಾಗಿದೆ.
ಇದನ್ನೂ ಓದಿ: ಮಳೆ ಹಾನಿ ಪ್ರದೇಶಗಳಲ್ಲಿ ಪರಿಹಾರ ಕಾರ್ಯಕ್ಕೆ ಸಿಎಂ ಬೊಮ್ಮಾಯಿ ಸೂಚನೆ
ನೆರೆ ಪರಿಸ್ಥಿತಿ ನಿರ್ಮಾಣವಾದ ಮನೆಗಳ ಬಳಿ ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ಭೇಟಿ ನೀಡಿ ಪರಿಶೀಲಿಸಿದ್ದು, ಈ ವೇಳೆ ಐಆರ್‌ಬಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಈ ಹಿಂದೆಯೇ ಸಭೆ ನಡೆಸಿ ಸಂಬಂಧಪಟ್ಟವರಿಗೆ ಸೂಕ್ತ ಸೂಚನೆ ನೀಡಿದ್ದರೂ ಸಹ ನಿರ್ಲಕ್ಷ್ಯ ವಹಿಸಿದ್ದು, ನೌಕಾನೆಲೆ ಭಾಗದಲ್ಲೂ ನೀರು ಹರಿದುಹೋಗಲು ಅವಕಾಶ ಇಲ್ಲದಿರುವುದರಿಂದ ಈ ರೀತಿ ಕೃತಕ ನೆರೆ ಸೃಷ್ಟಿಯಾಗುವಂತಾಗಿದೆ ಅಂತಾ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಎರಡು ದಿನಗಳ ಕಾಲ ಭಾರಿ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದ್ದು, ಅರಗಾದಲ್ಲಿ ಕಾಳಜಿ ಕೇಂದ್ರವನ್ನ ಸಹ ತೆರೆಯಲಾಗಿದೆ.