ಶಿರಸಿ : ತಾಲೂಕಿನ ಪೂರ್ವಭಾಗ ಬನವಾಸಿ ಹೋಬಳಿಯಲ್ಲಿ ನಾಲ್ಕು ಮನೆಗಳು ಭಾಗಶಃ ಹಾನಿಗೊಳಗಾಗಿದ್ದು, ಕೆಲ ರೈತರ ತೋಟಗಳಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಮೂರ್ನಾಲ್ಕು ದಿನಗಳಿಂದ ಮಳೆಯಿಂದ ತಾಲೂಕಿನ ಬದನಗೋಡಿನ ಗಣಪತಿ ಕಮ್ಮಾರ್, ತಿಮ್ಮಣ್ಣ ಬೇಡರ್, ದನಗನಹಳ್ಳಿಯ ವಿನಾಯಕ ಗೊಂದಿ, ಕಾಳಂಗಿಯ ಪರಶುರಾಮ ಮಡಿವಾಳ ಅವರಿಗೆ ಸೇರಿದ ಮನೆಗಳು, ಮಳೆಗೆ ನೆನೆದು ಭಾಗಶಃ ಕುಸಿದಿವೆ. ಎಕ್ಕಂಬಿಯ ಅಣ್ಣಪ್ಪ ಶೇಟ್ ಎಂಬವರ ಮನೆ ಮೇಲೆ ಮರ ಬಿದ್ದು ಛಾವಣಿಗೆ ಹಾನಿಯಾಗಿದೆ. ಹೆಬ್ರೆಯ ಗಂಗಾಧರ ಗಣಪ ನಾಯ್ಕ ಅವರ ತೋಟದ ಕಂಟ ಒಡೆದು ತೋಟಕ್ಕೆ ನೀರು ನುಗ್ಗಿ ಮಣ್ಣು ಕೊಚ್ಚಿ ಹೋಗಿದೆ.

ಮಳೆಯಿಂದ ತಾಲೂಕಿನ ಜನಜೀವನ ಅಸ್ತವ್ಯಸ್ತಗೊಂಡಿದ್ದು, ದೀಪಾವಳಿ ಹಬ್ಬದ ಸಂಭ್ರಮಕ್ಕೆ ಎಡಬಿಡದೆ ಸುರಿಯುತ್ತಿರುವ ಮಳೆ ಅಡ್ಡಿಪಡಿಸಿದೆ. ಯಲ್ಲಾಪುರ, ಸಿದ್ದಾಪುರದಲ್ಲಿಯೂ ಸಣ್ಣ ಪ್ರಮಾಣದ ಮಳೆ ಆಗುತ್ತಿದೆ.