ಕಾರವಾರ: ನಗರದ ಜಗದೀಶ ಕುರ್ತಕೋಟಿ ಎಂಬುವರು ತಮ್ಮ ಅಂಗವೈಕಲ್ಯತೆಯನ್ನು ಮರೆತು ಕೊರೊನಾ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್ಗೆ ಟೀ, ತಿಂಡಿ, ನೀರು ಪೂರೈಸುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಇವರು ಮೂಲತಃ ಹುಬ್ಬಳ್ಳಿಯವರಾಗಿದ್ದು ಆರ್ಥಿಕವಾಗಿ ಅಷ್ಟೇನೂ ಶ್ರೀಮಂತರೇನು ಅಲ್ಲ. ಮಧ್ಯಾಹ್ನ ಗೂಡಂಗಡಿಗಳಿಗೆ ಪಾನ್ ಮಸಾಲೆ ಪೂರೈಸಿ ಸಂಜೆ ಹೊಟೆಲ್ಗಳಲ್ಲಿ ಕೆಲಸ ಮಾಡುತ್ತಿದ್ದ ಇವರಿಗೆ ಒಂದು ಕೈ ಸಹ ಇಲ್ಲ. ಆದರೂ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆನ್ನುವ ತುಡಿತದಿಂದ ತಮ್ಮ ಸ್ನೇಹಿತರಾದ ನೂತನ್ ಜೈನ್ ಹಾಗೂ ರಾಜು ಜೊತೆ ಸೇರಿ ತಾವೇ ತಯಾರಿಸಿದ ಚಹಾ, ಬಿಸ್ಕೆಟ್ ಹಾಗೂ ತಿಂಡಿಗಳನ್ನು ಉಚಿತವಾಗಿ ಕೊರೊನಾ ವಿರುದ್ಧ ಹೋರಾಡುತ್ತಿರುವ ಪೊಲೀಸರು, ವೈದ್ಯರು ಸೇರಿದಂತೆ ಇತರೆ ಸ್ವಯಂ ಸೇವಕರಿಗೆ ವಿತರಿಸುತ್ತಿದ್ದಾರೆ.
ಲಾಕ್ ಡೌನ್ ಆರಂಭದಿಂದಲೂ ನಮಗಾಗಿ ಸೇವೆ ಮಾಡುತ್ತಿರುವವರಿಗೆ ಚಹಾ ತಿಂಡಿ ಕೊಡುವ ಆಲೋಚನೆ ಬಂದಿತ್ತು. ನನ್ನಂತೆಯೇ ಸ್ನೇಹಿತರಾದ ನೂತನ್ ಜೈನ್ ಹಾಗೂ ರಾಜು ನೀರು ಬಿಸ್ಕತ್ ನೀಡುತ್ತಿದ್ದರು. ಕೊನೆಗೆ ಮೂವರು ಸೇರಿ ನಗರದ ಬೀದಿ ಬೀದಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು, ವೈದ್ಯಕೀಯ ಸಿಬ್ಬಂದಿ, ಪೆಟ್ರೋಲ್ ಬಂಕ್ ಸಿಬ್ಬಂದಿ, ಪತ್ರಕರ್ತರು ಹೀಗೆ ಹಲವು ಜನ ಕೊರೊನಾ ವಾರಿಯರ್ಸ್ಗೆ ಉಚಿತವಾಗಿ ನೀಡುತ್ತಿದ್ದೇವೆ ಎಂದು ಈಟಿವಿ ಭಾರತಕ್ಕೆ ಜಗದೀಶ ಕುರ್ತಕೋಟಿ ತಿಳಿಸಿದ್ದಾರೆ.
ಲಾಕ್ಡೌನ್ನಿಂದಾಗಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿರುವುದರಿಂದ ಹನಿ ನೀರು ಸಿಗುವುದು ಕಷ್ಟವೇ. ಆದರೆ ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಜಗದೀಶ್ ಹಾಗೂ ಅವರ ಸ್ನೇಹಿತರಿಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಈ ನಿಸ್ವಾರ್ಥ ಸೇವೆಗೆ ಸಲಾಂ ಹೇಳೋಣ.