ಕಾರವಾರ: ಉತ್ತರಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರನ್ನು ವರ್ಗಾವಣೆ ಮಾಡಿದ್ದು, ನೂತನ ಜಿಲ್ಲಾಧಿಕಾರಿಯಾಗಿ ಬೆಂಗಳೂರಿನ ದಿ ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ ನಿರ್ದೇಶಕರಾಗಿದ್ದ ಪ್ರಭುಲಿಂಗ ಕವಲಿಕಟ್ಟಿ ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಉತ್ತರಕನ್ನಡ ಜಿಲ್ಲಾಧಿಕಾರಿಯಾಗಿ 2021ರ ಫೆ.15 ರಂದು ಮುಲ್ಲೈ ಮುಗಿಲನ್ ಎಂ.ಪಿ ಅಧಿಕಾರ ವಹಿಸಿಕೊಂಡಿದ್ದರು. ಅವರು ಮೂಲತಃ ತಮಿಳುನಾಡಿನವರಾಗಿದ್ದು, 2013ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದಾರೆ. ಉತ್ತರಕನ್ನಡ ಜಿಲ್ಲೆಗೆ ಬಂದಾಗಿನಿಂದ ತಮ್ಮ ಸರಳ ಹಾಗೂ ಸೌಮ್ಯ ಸ್ವಭಾವದಿಂದ ಗುರುತಿಸಿಕೊಂಡಿದ್ದrಉ. ಸಭೆ, ಸಮಾರಂಭ ಗ್ರಾಮ ವಾಸ್ತವ್ಯ ಸಂದರ್ಭ ಸೇರಿದಂತೆ ಬಹುತೇಕ ಎಲ್ಲ ಕಡೆಯೂ ಜನರೊಂದಿಗೆ ಬೆರೆತು ಸಮಸ್ಯೆಗಳನ್ನು ಆಲಿಸುತ್ತಿದ್ದರು.
ಸರ್ಕಾರ ಇದೀಗ ಅವರನ್ನು ಬೆಂಗಳೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾಗಿ ನೇಮಕಗೊಳಿಸಿ, ವರ್ಗಾವಣೆ ಮಾಡಿದೆ. ಈಗ ಉತ್ತರ ಕನ್ನಡ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ 2013ನೇ ಬ್ಯಾಚ್ ನ ಐಎಎಸ್ ಅಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ಅವರನ್ನು ನೇಮಕ ಮಾಡಿದೆ.