ಕಾರವಾರ(ಉತ್ತರ ಕನ್ನಡ): ಗೋಕರ್ಣ ಪುರಾಧೀಶ ಮಹಾಬಲೇಶ್ವರನಿಗೂ ಗಂಗಾವಳಿ ಸೀಮೆಯ ಗಂಗೆಗೂ ನಿಶ್ಚಿತಾರ್ಥವನ್ನು ಊರವರೆಲ್ಲ ಸೇರಿ ಗಂಗಾಷ್ಠಮಿಯಂದು ನೆರವೇರಿಸಿದರು. ಈ ಅಪೂರ್ವ ಕ್ಷಣಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ತಾಂಬೂಲೋತ್ಸವಕ್ಕೆ ಇಡೀ ಗೋಕರ್ಣ ಸೀಮೆಯಲ್ಲಿ ಜಾತ್ರೆಯ ವಾತಾವರಣ ಸೃಷ್ಟಿಯಾಗಿತ್ತು. ಎಲ್ಲೆಲ್ಲೂ ತಳಿರು ತೋರಣ, ಝಗಮಗಿಸುವ ವಿದ್ಯುದ್ದೀಪಗಳ ಅಲಂಕಾರ ಮಾಡಲಾಗಿತ್ತು. ಮನೆಗಳ ಮುಂದೆ, ಓಣಿ ಓಣಿಗಳಲ್ಲಿ ರಂಗೋಲಿಯ ಚಿತ್ತಾರ ಹರಡಿದ್ದವು.
ತಾಂಬೂಲೋತ್ಸವದ ಶಾಸ್ತ್ರವಾಗಿ ಗೋಕರ್ಣ ಸೀಮೇಯ ಹಾಲಕ್ಕಿ ಒಕ್ಕಲಿಗರು ಮಹಾಬಲೇಶ್ವರ ದೇವಾಲಯದಿಂದ ದೇವರ ಪಲ್ಲಕ್ಕಿಯ ಸಕಲ ಬಿರುದು ಬಾವಲಿ, ವಾದ್ಯ ಘೋಷದೊಂದಿಗೆ ಗಂಗಾವಳಿಗೆ ತೆರಳಿದರು. ಗಂಗಾಷ್ಠಮಿಯಂದು ಸೂರ್ಯ ಮೂಡುವುದಕ್ಕೂ ಮೊದಲೇ ಗಂಗಾವಳಿ ನದಿಯಲ್ಲಿ ಸ್ನಾನ ಮಾಡಿದರು. ಬಳಿಕ ಗಂಗಾಮಾತಾ ದೇವಾಲಯಕ್ಕೆ ಕನ್ಯೆ ನೋಡಲು ತೆರಳಿದರು.
ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗಂಗಾಮಾತೆಯು ಮಹಾಬಲೇಶ್ವರನನ್ನು ಮದುವೆಯಾಗುವುದಾಗಿ ಒಪ್ಪಿ, ನಿಶ್ಚಿತಾರ್ಥ ತಾಂಬೂಲೋತ್ಸವ ನಡೆಸಲಾಯಿತು. ಗಂಗಾವಳಿ ಸೀಮೆಯ ಅಂಬಿಗರು ಗಂಗಾಮಾತೆಯನ್ನು ಮದುವೆಗೆ ಒಪ್ಪಿಸಿದರು. ಇನ್ನು ಆರು ದಿನಗಳ ಬಳಿಕ, ಅಂದರೆ ಈ ಬಾರಿಯ ನರಕ ಚತುರ್ದಶಿಯಂದು ಗಂಗೆಗೂ-ಮಹಾಬಲೇಶ್ವರನಿಗೂ ವಿವಾಹ ಮಾಡಿಸುವುದಾಗಿ ದಿನ ನಿಗದಿ ಮಾಡುವ ಮೂಲಕ ತಾಂಬೂಲೋತ್ಸವ ನೆರವೇರಿಸಲಾಯಿತು.
ಗಂಗಾರತಿ ವೈಭವ: ಇನ್ನು ಕಾಶಿಯಲ್ಲಿ ನಡೆಯುವ ಗಂಗಾರತಿಯಂತೆ ದಕ್ಷಿಣ ಕಾಶಿ ಗೋಕರ್ಣದಲ್ಲೂ ಅದ್ಧೂರಿಯಾಗಿ ಗಂಗೆಗೆ ಆರತಿ ಬೆಳಗುವ ವಿಶೇಷ ಸಂಪ್ರದಾಯ ನಡೆಯಿತು. ಗೋಕರ್ಣ ಭಾಗದಲ್ಲಿ ಹರಿಯುವ ಗಂಗಾವಳಿ ನದಿಗೆ ಗಂಗಾಷ್ಠಮಿಯ ಮುನ್ನಾದಿನ ರಾತ್ರಿ ಆರತಿ ಬೆಳಗುವ ಮೂಲಕ ವಿಶೇಷ ಗೌರವ ಸಲ್ಲಿಸಲಾಯಿತು. ಕಲಬುರರ್ಗಿ ರಾಷ್ಟ್ರೀಯ ಕೋಲಿ (ಬೆಸ್ತ) ಸಾಂಸ್ಕೃತಿಕ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ವಿಶೇಷ ಗಂಗಾರತಿ ಕಾರ್ಯಕ್ರಮದಲ್ಲಿ ಕುಮಟಾ ಯುವ ಬ್ರಿಗೇಡ್ ತಂಡದವರು ಆಕರ್ಷಕವಾಗಿ ಗಂಗಾರತಿ ನೆರವೇರಿಸಿದರು.
ಒಂದೆಡೆ ಝಗಮಗಿಸುವ ವಿದ್ಯುತ್ ದೀಪಗಳು ಕಣ್ಮನ ಸೆಳೆದರೆ, ಮತ್ತೊಂದೆಡೆ ಯುವ ಬ್ರಿಗೇಡ್‌ನ ಯುವಕ-ಯುವತಿಯರು ರಾಗಬದ್ಧ ಹಿನ್ನೆಲೆ ಸಂಗೀತಕ್ಕೆ ಬೆಳಗಿದ ಗಂಗಾರತಿಯನ್ನು ಸಾವಿರಾರು ಜನ ಕಣ್ತುಂಬಿಕೊಂಡರು.
ಇದನ್ನೂ ಓದಿ: ಠಾಗೋರ್ ಕಡಲ ತೀರದಲ್ಲಿ ಮುಗಿಲೆತ್ತರ ಹಾರಾಡಿದ ನೂರಾರು ಹಳದಿ, ಕೆಂಪು ಗಾಳಿಪಟಗಳು