ಕಾರವಾರ: ಸ್ಯಾನಿಟರಿ ಪ್ಯಾಡ್ ಮಧ್ಯೆ ಗೋವಾ ಮದ್ಯ ಸಾಗಿಸುತ್ತಿದ್ದ ಕಂಟೇನರ್ ಲಾರಿ ಸಮೇತ ಚಾಲಕನನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಜೊಯಿಡಾ ತಾಲೂಕಿನ ಅನಮೋಡ್ ಚೆಕ್ ಪೋಸ್ಟ್ ಬಳಿ ಇಂದು ನಡೆದಿದೆ.
ಗೋವಾ-ಬೆಳಗಾವಿ ಮಾರ್ಗವಾಗಿ ಬಂದ ಕಂಟೇನರ್ ಲಾರಿಯನ್ನು ಅನಮೋಡ್ ಚೆಕ್ ಪೋಸ್ಟ್ ಬಳಿ ತಡೆದ ಅಬಕಾರಿ ಸಿಬ್ಬಂದಿ ತಪಾಸಣೆ ನಡೆಸಿದರು. ತಮಿಳುನಾಡು ನೋಂದಣಿಯ ಲಾರಿಯಲ್ಲಿ ವಿಸ್ಪರ್ ಕಂಪನಿಯ ಸ್ಯಾನಿಟರಿ ಪ್ಯಾಡ್ಗಳ ಬಾಕ್ಸ್ಗಳು ಇದ್ದವು. ಇವುಗಳ ನಡುವೆಯೇ 43 ಸಾವಿರ ರೂ. ಮೌಲ್ಯದ ಗೋವಾ ಮದ್ಯ ಪತ್ತೆಯಾಗಿದೆ.
ಇದರಿಂದಾಗಿ ಅನುಮಾನಗೊಂಡ ಸಿಬ್ಬಂದಿ, ಸ್ಯಾನಿಟರಿ ಪ್ಯಾಡ್ಗಳ ಬಿಲ್ಗಳನ್ನು ಕೇಳಿದಾಗ ಇದಕ್ಕೂ ಯಾವುದೇ ದಾಖಲೆಗಳಿರಲಿಲ್ಲ. ಹೀಗಾಗಿ ಚಾಲಕ ತಮಿಳುನಾಡು ಕೊಯಮತ್ತೂರು ಮೂಲದ ಸುಂದರರಾಜ್ ರಾಮಸ್ವಾಮಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಲಾರಿಯಲ್ಲಿದ್ದ ಸ್ಯಾನಿಟರಿ ಪ್ಯಾಡ್ಗಳ ಮೌಲ್ಯ 11.50 ಲಕ್ಷವಾಗಿದ್ದು, ಜಪ್ತಿಯಾದ ಲಾರಿಯ ಅಂದಾಜು ಮೌಲ್ಯ 18 ಲಕ್ಷವಾಗಿದೆ.
ಅಬಕಾರಿ ಸಬ್ ಇನ್ಸ್ಪೆಕ್ಟರ್ ರೇಷ್ಮಾ ಬಾನಾವಳಿಕರ್, ರಕ್ಷಕರಾದ ಎಂ.ಕೆ.ಮೊಗೇರ, ಸದಾಶಿವ ರಾಠೋಡ, ಟಿ.ಬಿ.ಗೊಂಡ, ಉಳ್ಳಪ್ಪ ತಳಸೆ, ದೀಪಕ್ ಬಾರಾಮತಿ ಈ ವೇಳೆ ಇದ್ದರು.