ಕಾರವಾರ (ಉತ್ತರ ಕನ್ನಡ): ಜಿಲ್ಲೆಯ ಭಟ್ಕಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದ್ದು, ಎಲ್ಲಾ ಸೋಂಕಿತರನ್ನು ಕಾರವಾರದ ಮೆಡಿಕಲ್ ಕಾಲೇಜಿಗೆ ಕರೆ ತಂದು ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಇದೇ ಕಾರಣಕ್ಕೆ ಗೋವಾದ ಕೆಲ ಕಂಪನಿಗಳು ಕಾರವಾರದ ಕಾರ್ಮಿಕರಿಗೆ ಕೆಲಸಕ್ಕೆ ಬರದಂತೆ ಸೂಚನೆ ನೀಡಿರುವ ಆರೋಪ ಕೇಳಿ ಬಂದಿದ್ದು, ಕಾರ್ಮಿಕರ ಆತಂಕಕ್ಕೆ ಕಾರಣವಾಗಿದೆ.
ಕಾರವಾರದಲ್ಲಿ ಕೊರೊನಾ ಸೋಂಕಿತರು ಇರುವುದರಿಂದ ಗೋವಾಕ್ಕೆ ಬರುವ ಕಾರ್ಮಿಕರಿಂದ ಸೋಂಕು ಹರಡುತ್ತದೆ ಎನ್ನುವ ಉದ್ದೇಶದಿಂದ ಕಾರ್ಮಿಕರಿಗೆ ಗಡಿಯೊಳಕ್ಕೆ ಬರದಂತೆ ತಿಳಿಸಲಾಗಿದೆ. ಇದರಿಂದಾಗಿ ಕಾರವಾರದಿಂದ ಗೋವಾಕ್ಕೆ ಕೆಲಸಕ್ಕೆಂದು ತೆರಳುತ್ತಿದ್ದ ಸಾವಿರಾರು ಮಂದಿ ಕಾರ್ಮಿಕರಿಗೆ ದಿಕ್ಕು ತೋಚದಂತಾಗಿದೆ. ಜಿಲ್ಲೆಯ ಭಟ್ಕಳ ಪಟ್ಟಣವೊಂದರಲ್ಲೇ ಈ ಮೊದಲು 11 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದೀಗ ಹೊಸದಾಗಿ 28 ಪ್ರಕರಣಗಳು ದಾಖಲಾಗಿವೆ.
ಈ ಹಿಂದೆ ಸೋಂಕಿತರನ್ನು ಕಾರವಾರದ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ನೂತನವಾಗಿ ಕೋವಿಡ್-19 ವಾರ್ಡ್ ನಿರ್ಮಾಣವಾಗಿರುವುದರಿಂದ ಎಲ್ಲಾ ಸೋಂಕಿತರನ್ನೂ ಕಾರವಾರ ನಗರಕ್ಕೆ ಕರೆ ತರಲಾಗಿದೆ. ಹೀಗಾಗಿ ಗೋವಾದ ಕಂಪನಿಗಳು ಕಾರವಾರದ ಕಾರ್ಮಿಕರಿಗೆ ಕೆಲಸಕ್ಕೆ ಬರದಂತೆ ಸೂಚನೆ ನೀಡಿವೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ಇನ್ನು ಭಟ್ಕಳದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಭಟ್ಕಳ ಮಾತ್ರವಲ್ಲದೇ ಇಡೀ ಜಿಲ್ಲೆಯ ಜನತೆಗೆ ಆತಂಕ ಮೂಡಿಸಿದೆ.
ಇನ್ನು ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ, ಮೆಡಿಕಲ್ ಕಾಲೇಜಿನ ಕೋವಿಡ್ ವಾರ್ಡ್ ಹಾಗೂ ಸರ್ಕಾರಿ ಜಿಲ್ಲಾಸ್ಪತ್ರೆ ನಡುವೆ 100 ಮೀಟರ್‌ಗಳ ಅಂತರ ಇದೆ. ಅಲ್ಲದೇ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಎಲ್ಲಾ ವೈದ್ಯಕೀಯ ಸಿಬ್ಬಂದಿಗೂ ಸಹ ಸುರಕ್ಷತಾ ಕ್ರಮಗಳನ್ನ ಕೈಗೊಂಡಿದ್ದು, ಅವರನ್ನೂ ಸಹ ಪ್ರತ್ಯೇಕವಾಗಿಯೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಸಾರ್ವಜನಿಕರು ಆತಂಕ ಪಡುವ ಅಗತ್ಯತೆ ಇಲ್ಲ ಎಂದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರೋಷನ್ ತಿಳಿಸಿದ್ದಾರೆ.