ಕಾರವಾರ: ದುಪ್ಪಟ್ಟು ಮಾಡಿರುವ ಮನೆಕರದಿಂದಾಗಿ ಬಡ ಕೂಲಿಕಾರ್ಮಿಕರಿಗೆ ಹೊರೆಯಾಗಿದ್ದು, ಈ ಬಗ್ಗೆ ಸಮೀಕ್ಷೆ ನಡೆಸಿ ಬಡವರಿಗೆ ರಿಯಾಯಿತಿ ನೀಡುವಂತೆ ತಾಲೂಕಿನ ಕಡವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಒತ್ತಾಯಿಸಿದ್ದಾರೆ.
ಜಿಲ್ಲಾ ಪಂಚಾಯಿತಿಗೆ ತೆರಳಿ ಸಿಇಓ ಅನುಪಸ್ಥಿತಿಯಲ್ಲಿ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ಕಡವಾಡ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೂರಾರು ಮನೆಗಳಿದ್ದು ಬಹುತೇಕರು ದಿನಗೂಲಿ ಕಾರ್ಮಿಕರು ಹಾಗೂ ಮಧ್ಯಮವರ್ಗದವರು ಜೀವನ ನಡೆಸುತ್ತಿದ್ದಾರೆ. ಅಲ್ಲದೆ ಬಹುತೇಕರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಕಚ್ಚಾಮನೆ ನಿರ್ಮಾಣ, ಬುಟ್ಟಿ ನೇಯುವುದು ಸೇರಿದಂತೆ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಇದೀಗ ಗ್ರಾಮ ಪಂಚಾಯಿತಿಯಿಂದ ದುಪ್ಪಟ್ಟು ಮನೆಕರ ಸಂಗ್ರಹಿಸುತ್ತಿದ್ದು, ಗ್ರಾಮದ ಬಡ ಕೂಲಿ ಕಾರ್ಮಿಕರಿಗೆ ಹೊರೆಯಾಗಿದೆ ಎಂದು ಅಳಲು ತೋಡಿಕೊಂಡರು.
ದಿನದ ದುಡಿಮೆ ಮಕ್ಕಳ ವಿದ್ಯಾಭ್ಯಾಸ, ಬಟ್ಟೆ, ಆರೋಗ್ಯ ಸೇರಿದಂತೆ ಇಂತಹ ದಿನನಿತ್ಯದ ಖರ್ಚಿಗೆ ಸರಿಯಾಗುತ್ತಿದೆ. ಅದರಲ್ಲೂ ಇತ್ತೀಚೆಗೆ ಮರಳು ಸಿಗದ ಕಾರಣ ಕೂಲಿ ಸಿಗದಂತಾಗಿದ್ದು, ಜೀವನ ಸಾಗಿಸುವುದೇ ಕಷ್ಟಸಾಧ್ಯವಾಗಿದೆ. ಆದ್ದರಿಂದ ಎರಡು ಪಟ್ಟು ಮಾಡಿರುವ ಮನೆಕರದಲ್ಲಿ ಬಡ ಕೂಲಿ ಕಾರ್ಮಿಕರಿಗೆ ವಿನಾಯಿತಿ ನೀಡಬೇಕು. ಅವಶ್ಯವಿದ್ದಲ್ಲಿ ಗ್ರಾಮಕ್ಕೆ ತೆರಳಿ ಮನೆಗಳನ್ನು ಸಮೀಕ್ಷೆ ಮಾಡಿ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.