ಕಾರವಾರ (ಉತ್ತರ ಕನ್ನಡ): ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಅನಿಲ ಸೋರಿಕೆಯಾಗುತ್ತಿರುವ ಘಟನೆ ಹೊನ್ನಾವರ ಪಟ್ಟಣದ ಶರಾವತಿ ಸರ್ಕಲ್ ಬಳಿ ಇಂದು ನಡೆದಿದೆ. ಮಂಗಳೂರು ಕಡೆಯಿಂದ ಹುಬ್ಬಳ್ಳಿ ಕಡೆಗೆ ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಘಟನೆಯಲ್ಲಿ ಚಾಲಕ ಗಂಭೀರ ಗಾಯಗೊಂಡಿದ್ದಾನೆ. ಅಲ್ಲದೆ ಅನಿಲ ತುಂಬಿದ್ದ ಕಾರಣ ಟ್ಯಾಂಕರ್ ಪಲ್ಟಿಯಾದಾಗ ಸಣ್ಣ ಪ್ರಮಾಣದಲ್ಲಿ ಅನಿಲ ಸೋರಿಕೆಯಾಗತೊಡಗಿದೆ. ಸದ್ಯ ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಹಾಗೂ ಪೊಲೀಸರು ಆಗಮಿಸಿ ಮುನ್ನೆಚ್ಚರಿಕೆ ವಹಿಸಿದ್ದಾರೆ. ಸುತ್ತಮುತ್ತಲಿನ ಮನೆಗಳಿಗೆ ಬೆಂಕಿ ಉರಿಸದಂತೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ ಅನಿಲ ಸೋರಿಕೆ ತಡೆಗಟ್ಟಲು ಪ್ರಯತ್ನಿಸಲಾಗಿದ್ದು, ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ತಡೆಹಿಡಿಯಲಾಗಿದೆ. ಅನಿಲ ಸೋರಿಕೆಯಿಂದಾಗಿ ಸ್ಥಳೀಯರು ಆತಂಕ ಮೂಡಿದೆ.
ನೀರು ಅರಸಿ ಬಂದ ಜಿಂಕೆ ಅನುಮಾನಾಸ್ಪದ ಸಾವು: ನೀರು ಅರಸಿ ಬಂದ ಜಿಂಕೆಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮುಂಡಗೋಡದ ಸನವಳ್ಳಿ ಜಲಾಶಯದ ಬಳಿ ನಡೆದಿದೆ. ಬಿರು ಬೇಸಿಗೆಯಿಂದಾಗಿ ಎಲ್ಲೆಡೆ ನೀರಿಗೆ ಹಾಹಾಕಾರ ಶುರುವಾಗಿದೆ. ಅದರಲ್ಲಿಯೂ ಕಾಡು ಪ್ರಾಣಿಗಳಿಗೆ ಇದ್ದ ಜಲಮೂಲಗಳು ಭತ್ತಿದ ಕಾರಣ ನೀರು ಅರಸಿ ನಾಡಿನ ಕಡೆ ಹೆಜ್ಜೆ ಹಾಕುವಂತಾಗಿದೆ. ಇದೇ ರಿತಿ ಮುಂಡಗೋಡದ ಸನವಳ್ಳಿ ಜಲಾಶಯಕ್ಕೆ ಆಗಮಿಸಿದ್ದ ಜಿಂಕೆಯೊಂದು ಕೆಲ ದಿನಗಳ ಹಿಂದೆ ಮೃತಪಟ್ಟಿದೆ.
ಜಿಂಕೆ ಹೂಳಿನಲ್ಲಿ ಸಿಲುಕಿ ಸಾವನ್ನಪ್ಪಿದೆಯೋ, ಇಲ್ಲ ಇನ್ನಾವುದೇ ಕಾರಣದಿಂದ ಸಾವನ್ನಪ್ಪಿದೆಯೋ ಗೊತ್ತಾಗಬೇಕಿದೆ. ಆದರೆ ಮೃತದೇಹ ಕಂಡ ಸ್ಥಳೀಯರಾದ ರಾಜು ಗುಬ್ಬಕ್ಕನವರ ಜಿಂಕೆ ಮೃತಪಟ್ಟಿರುವ ಬಗ್ಗೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಜಿಂಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಅರಣ್ಯ ರಕ್ಷಕ ರಾಜು, ಸಿಬ್ಬಂದಿಗಳಾದ ಕೃಷ್ಣಾ ದೊಡ್ಡಮನಿ, ಫಕೀರಪ್ಪ ಬಾಳೆಗಡ್ಡಿ ಮಠ ಇದ್ದರು.
ಭಾರೀ ವಾಹನ ಸಂಚಾರ, ಬಿರುಕು ಬಿಟ್ಟ ಸೇತುವೆ: ನವೀಕರಿಸಿದ ಹಳೆ ಸೇತುವೆಯ ಭೀಮ್ ಬಿರುಕು ಬಿಟ್ಟ ಪರಿಣಾಮ ಸಂಚಾರ ಸ್ಥಗಿತಗೊಂಡ ಘಟನೆ ಅಂಕೋಲಾ ಸಮೀಪದ ಹಟ್ಟಿಕೇರಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇತ್ತೀಚೆಗೆ ನಡೆದಿತ್ತು. ಕಾರವಾರ ಅಂಕೋಲಾ ನಡುವಿನ ಹಟ್ಟಿಕೇರಿ ಬಳಿಯ ಹಳ್ಳಕ್ಕೆ 40 ವರ್ಷಗಳ ಹಿಂದೆ ನಿರ್ಮಿಸಿದ ಸೇತುವೆಯನ್ನು ಕಳೆದ ಮೂರು ತಿಂಗಳ ಹಿಂದೆ ಖಾಸಗಿ ಕಂಪನಿಯೊಂದು ದುರಸ್ತಿಗೊಳಿಸಿ ಡಾಂಬರೀಕರಣದ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಿತ್ತು.
ಆದರೆ ಬೃಹತ್ ವಾಹನವೊಂದು ಸಂಚರಿಸಿದ ಪರಿಣಾಮ ಸೇತುವೆ ಪಿಲ್ಲರ್ ಬೇರಿಂಗ್ ಕಟ್ಟಾಗಿ ಕುಸಿದಿದ್ದು, ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಮಹಾರಾಷ್ಟ್ರದ ಕೊಲ್ಲಾಪುರದಿಂದ ಗೋವಾಗೆ ಪ್ರಯಾಣ ಬೆಳೆಸಿದ್ದ ಮೂರು ಬಾರಿ ವಾಹನಗಳು ವಿದ್ಯುತ್ ಪರಿವರ್ತಕವನ್ನು ಹೊತ್ತು ಸಾಗುತ್ತಿದ್ದವು. ಹೈಡ್ರಾಲಿಕ್ ತಂತ್ರಜ್ಞಾನ ಹೊಂದಿರುವ ಈ ಭಾರಿ ವಾಹನ 138 ಚಕ್ರಗಳೊಂದಿಗೆ ಒಟ್ಟು 228 ಟನ್ ಭಾರ ಹೊಂದಿತ್ತು.
ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಗ್ಯಾರಂಟಿಗೆ ಒಪ್ಪಿಗೆ: ಬಿಪಿಎಲ್ ಕಾರ್ಡ್ಗಾಗಿ ಕಚೇರಿಗಳಿಗೆ ಮುಗಿಬಿದ್ದ ಜನ