ಕಾರವಾರ (ಉತ್ತರ ಕನ್ನಡ): ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಅಂಕೋಲಾದ ಹೋರಾಟಗಾರರ ಪಾತ್ರ ದೇಶಕ್ಕೂ ಮಾದರಿಯಾಗಿತ್ತು. ಬ್ರಿಟಿಷರ ದಬ್ಬಾಳಿಕೆ ವಿರುದ್ಧ ಸೆಟೆದೆದ್ದಿದ್ದ ಇಲ್ಲಿನ ಹೋರಾಟಗಾರರ ಉತ್ಸಾಹ ಕಂಡು ಸ್ವತಃ ಗಾಂಧೀಜಿಯೇ ಬಂದು ಉಪ್ಪಿನ ಸತ್ಯಾಗ್ರಹ, ಕರಬಂಧಿ ಚಳವಳಿಗೆ ಪ್ರೋತ್ಸಾಹಿಸಿದ್ದರು.
ಅಂಕೋಲಾದಲ್ಲಿ ಸ್ವಾತಂತ್ರ್ಯಕ್ಕಾಗಿ ಪ್ರತಿ ಮನೆಯಿಂದಲೂ ಹೋರಾಟಕ್ಕೆ ಮುಂದಾಗಿದ್ದರು. ಈ ಹೋರಾಟದಲ್ಲಿ ಪಾಲ್ಗೊಂಡಿದ್ದ ಹೊಸ್ಕೇರಿಯ ದಿ.ಸುಬ್ಬಯ್ಯ ನಾಯಕ ಕೂಟ ಒಬ್ಬರು. ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಪಾಲ್ಗೊಂಡಿದ್ದಕ್ಕಾಗಿ ನಿತ್ಯವೂ ಊರಿಗೆ ಬಂದು ಹುಡುಕುತ್ತಿದ್ದರು. ಒಂದು ದಿನ ಬ್ರಿಟಿಷರ ಕೈಗೆ ಸಿಕ್ಕಿದ್ದ ಸುಬ್ಬಯ್ಯ ಅವರನ್ನು ಬಂಧಿಸಿ ಜೈಲಿನಲ್ಲಿ ಇಡಲಾಗಿತ್ತು. ಅವರು ಜೈಲಿನಿಂದ ಬಂದ ಬಳಿಕ ನಮ್ಮ ಮದುವೆ ನಡೆಯಿತು ಎಂದು 90 ವರ್ಷದ ಅವರ ಪತ್ನಿ ರಾಕಮ್ಮ ನೆನಪು ಮಾಡಿಕೊಂಡರು.
ಸ್ವಾತಂತ್ರ್ಯ ಹೋರಾಟದ ವೇಳೆಗೆ ಪೊಲೀಸರು ನಮ್ಮೂರಿಗೆ ಇಲ್ಲಿನ ಹೋರಾಟಗಾರರನ್ನು ಹುಡುಕಿಕೊಂಡು ಬರುತ್ತಿದ್ದರು. ಆಗ ನಾವು ಎಲ್ಲರಿಗೂ ಅಡಗಿಕೊಳ್ಳಲು ತಿಳಿಸುತ್ತಿದ್ದೆವು. ಸೂರ್ವೆಯ ಅನೇಕ ಕುಟುಂಬದ ಯುವಕರು ಅಂದು ಅಸಹಕಾರ, ಕರಬಂಧಿ ಚಳವಳಿಯಲ್ಲಿ ಪಾಲ್ಗೊಂಡು ಜೈಲು ಸೇರಿದ್ದರು. ಅಗಸೂರು, ಅವರ್ಸಾ, ಬಾಸ್ಗೋಡು, ಬೇಲಿಕೇರಿ, ಭಾವಿಕೇರಿ ಹಾಗೂ ಮುಂತಾದ ಗ್ರಾಮಗಳ ಗ್ರಾಮಸ್ಥರು ಈ ಕರ ನಿರಾಕರಣೆ ಅಭಿಯಾನದಲ್ಲಿ ಮನಃಪೂರ್ವಕವಾಗಿ ಪಾಲ್ಗೊಂಡಿದ್ದರು ಎಂದು ತಿಳಿಸಿದರು.
ಜಮೀನ್ದಾರರು, ನಾಡವರು ಮತ್ತು ಅನೇಕ ಹಾಲಕ್ಕಿ ಒಕ್ಕಲು ಹಿಡುವಳಿದಾರರು ಜಮೀನುದಾರರಿಗೆ ತಮ್ಮ ಪಾಲನ್ನು ನೀಡಲು ನಿರಾಕರಿಸಿ ಹೋರಾಟ ತೀವ್ರಗೊಳಿಸಿದ್ದರು. ಗಾಂಧೀಜಿಯವರನ್ನು ನೋಡಬೇಕು ಎಂಬ ಆಸೆ ಇತ್ತಾದರೂ ನನಗೆ ಸಾಧ್ಯವಾಗಿಲ್ಲ ಎಂದು ರಾಕಮ್ಮ ನಾಯಕ ಸ್ವಾತಂತ್ರ್ಯ ಹೋರಾಟದ ದಿನಗಳನ್ನು ಸ್ಮರಿಸಿದರು.
ಇದನ್ನೂ ಓದಿ : ಏಸೂರು ಕೊಟ್ರು ಈಸೂರು ಕೊಡೆವು.. 1942ರಲ್ಲೇ ಸ್ವಾತಂತ್ರ್ಯ ಘೋಷಿಸಿಕೊಂಡ ಮೊದಲ ಗ್ರಾಮ ಈಸೂರು..