ಕಾರವಾರ: 'ಕದಂಬ ನೌಕಾನೆಲೆ' ವೀಕ್ಷಣೆಗೆ ಡಿಸೆಂಬರ್ 22 ರಂದು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಿದೆ. ಈ ವೇಳೆ ದೇಶದ ಏಕೈಕ ಯುದ್ಧ ವಿಮಾನ ವಾಹಕವಾದ 'ಐಎನ್ಎಸ್ ವಿಕ್ರಮಾದಿತ್ಯ ನೌಕೆ'ಯನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ನೌಕಾ ದಿನಾಚರಣೆ ಹಾಗೂ ನೌಕಾಸೇನೆ ಕುರಿತು ಜಾಗೃತಿ ಮೂಡಿಸುವ ಅಂಗವಾಗಿ, ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 04.30 ರವರೆಗೆ ಭಾರತೀಯ ನೌಕಾದಳವು ಕದಂಬ ನೌಕಾನೆಲೆಯಲ್ಲಿ ಮುಕ್ತವಾಗಿರಿಸಿದೆ. ನೌಕಾನೆಲೆಗೆ ಭೇಟಿ ನೀಡುವವರಿಗೆ ಆಧಾರ್ ಅಥವಾ ಸರ್ಕಾರ ನೀಡಿದ ಯಾವುದಾದರು ಒಂದು ದಾಖಲೆ ನೀಡಿ, ಅರ್ಗಾ ಮುಖ್ಯ ದ್ವಾರದಿಂದ ಮಾತ್ರ ಪ್ರವೇಶ ಪಡೆಯಬಹುದಾಗಿದೆ.
ನೌಕಾನೆಲೆ ಒಳಗೆ ಯಾವುದೇ ಖಾಸಗಿ ವಾಹನಗಳು ತೆರಳಲು ಅವಕಾಶವಿಲ್ಲದ ಕಾರಣ, ಅರ್ಗಾ ಮುಖ್ಯ ದ್ವಾರದಿಂದ ನೌಕಾನೆಲೆಯ ಬಸ್ಗಳು ಪ್ರವಾಸಿಗರನ್ನು ಜೆಟ್ಟಿವರೆಗೆ ಕರೆದೊಯ್ಯಲಿವೆ. ಅಲ್ಲದೆ ಭೇಟಿ ವೇಳೆ ಮೊಬೈಲ್ ಫೋನ್, ಕ್ಯಾಮರಾ ಅಥವಾ ಯಾವುದೇ ಆಡಿಯೋ, ವಿಡಿಯೋ ರೆಕಾರ್ಡಿಂಗ್ ಸಾಧನ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿಲ್ಲ.