ಕಾರವಾರ: ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ನಡೆಯುತ್ತಿರುವ ಚತುಷ್ಪಥ ಹೆದ್ದಾರಿ ಕಾಮಗಾರಿ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಭಟ್ಕಳದಿಂದ ಕಾರವಾರದ ಮಾಜಾಳಿ ಗಡಿಯವರೆಗೆ ಹಾದು ಹೋಗಿರುವ ಹೆದ್ದಾರಿಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡುವ ಕಾರ್ಯ ಎಂಟು ವರ್ಷದ ಹಿಂದೆಯೇ ಪ್ರಾರಂಭಿಸಿದ್ದರೂ ಇನ್ನೂ ಮುಗಿದಿಲ್ಲ.
ಅವೈಜ್ಞಾನಿಕ ಕಾಮಗಾರಿ: ಕಾಮಗಾರಿ ಮುಗಿಯದೇ ಇದ್ದರೂ ಕಳೆದ ಎರಡು ವರ್ಷದ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೆದ್ದಾರಿಯನ್ನು ಉದ್ಘಾಟಿಸಿದ್ದಾರೆ. ಮಾತ್ರವಲ್ಲದೆ, ಜಿಲ್ಲೆಯ ಎರಡು ಕಡೆ ಟೋಲ್ ಸಂಗ್ರಹ ಮಾಡುವ ಕಾರ್ಯ ವರ್ಷದಿಂದಲೇ ನಡೆಯುತ್ತಿದೆ. ಇದೀಗ ಮಳೆಗಾಲ ಆರಂಭವಾಗಿದ್ದು, ಕರಾವಳಿಯುದ್ದಕ್ಕೂ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಆತಂಕ ಶುರುವಾಗಿದೆ.
ಸಂಚಾರ ಅಸ್ತವ್ಯಸ್ಥ: ಒಮ್ಮೆಲೆ ಸಿಗುವ ಡೈವರ್ಶನ್, ಕಿರಿದಾಗುವ ಹೆದ್ದಾರಿಯಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಕಾರವಾರ ನಗರದಲ್ಲೂ ಕೂಡ 1.2 ಕಿಲೋಮೀಟರ್ ರಸ್ತೆ ಪ್ಲೈಓವರ್ ನಡೆಸಲಾಗುತ್ತಿದೆ. ಆದರೆ ಸಂಬಂಧಪಟ್ಟ ಐಆರ್ಬಿ ಕಂಪನಿ ಹೇಳಿದ ಹಾಗೆ ಕೆಲಸಗಳನ್ನು ಮುಗಿಸಿಲ್ಲ. ಅಪೂರ್ಣ ಕಾಮಗಾರಿಯಿಂದ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ಥವಾಗುತ್ತಿದೆ ಎಂಬುದು ನಾಗರಿಕರ ಆರೋಪ.
2014ರಲ್ಲಿ ಕಾಮಗಾರಿ ಆರಂಭಿಸಲಾಗಿತ್ತಾದರೂ ಈವರೆಗೂ ಕರಾವಳಿ ಜಿಲ್ಲೆಯಲ್ಲಿ ಶೇ 60ರಷ್ಟು ಕಾಮಗಾರಿ ಮುಗಿದಿಲ್ಲ. ಆದರೆ ಅಲ್ಲಲ್ಲಿ ಸೇತುವೆ ಕಾಮಗಾರಿ, ಪ್ಲೈಓವರ್ ಕಾಮಗಾರಿ ಮಾಡಬೇಕಾಗಿದ್ದರಿಂದ ಕಂಪನಿ ಸಂಬಂಧಪಟ್ಟವರಿಂದ ಕೊಂಚ ವಿನಾಯಿತಿ ತೆಗೆದುಕೊಂಡಿತ್ತು. 2016ರಂದು ಪೂರ್ಣಗೊಳ್ಳಬೇಕಾಗಿದ್ದ ಕಾಮಗಾರಿಯನ್ನು 2020ಕ್ಕೆ ಮುಗಿಸುವುದಾಗಿ ಹೇಳಿತ್ತು. ಗಡುವು ಮುಗಿದ್ರೂ ಕೂಡ ಕಾಮಗಾರಿ ನಿಧಾನಗತಿಯಲ್ಲೇ ಸಾಗುತ್ತಿದೆ.
ಇದನ್ನೂ ಓದಿ: ಭ್ರಷ್ಟಾಚಾರದ ಬಗ್ಗೆ ದೂರು : 10 ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
ಈ ಬಗ್ಗೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಕಂಪನಿಗೆ ಸೂಚಿಸಲಾಗಿತ್ತು. ಶೀಘ್ರದಲ್ಲಿ ಪ್ಲೈ ಓವರ್‌ನ ಒಂದು ಬದಿ ಸೇರಿದಂತೆ ಕೆಲ ಭಾಗಗಳಲ್ಲಿ ಸಂಚಾರ ಆರಂಭಕ್ಕೆ ಅನುವು ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.