ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮೇಘ ಸ್ಫೋಟದಿಂದ ಹಿಂದೆಂದೂ ಕಂಡರಿಯದ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಭಾರಿ ಮಳೆಯಿಂದ ತಾಲೂಕಿನ ಹಲವು ಭಾಗದಲ್ಲಿ ನೀರು ತುಂಬಿ ಅಪಾರ ಪ್ರಮಾಣದ ಹಾನಿ ಸಂಭವಿಸಿದರೆ, ಇನ್ನೊಂದೆಡೆ ಮನೆಯೊಂದರ ಮೇಲೆ ಗುಡ್ಡ ಕುಸಿದು ಒಂದೇ ಕುಟುಂಬದ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ.
ತಾಲೂಕಿನ ಮುಟ್ಟಳ್ಳಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಕಳೆದ ರಾತ್ರಿಯಿಂದ ಭಟ್ಕಳದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಇಂದು ಬೆಳಗಿನ ಜಾವ ಮುಟ್ಟಳ್ಳಿ ಗ್ರಾಮದಲ್ಲಿನ ಮನೆ ಕುಸಿಯಿತು. ಮನೆಯಲ್ಲಿದ್ದ ಲಕ್ಷ್ಮಿ ನಾಯ್ಕ (48), ಮಗಳು ಲಕ್ಷ್ಮಿ (33), ಮಗ ಅನಂತ ನಾರಾಯಣ ನಾಯ್ಕ (32) ಹಾಗೂ ನಿನ್ನೆ ರಾತ್ರಿಯಷ್ಟೇ ತಂಗಲು ಬಂದಿದ್ದ ಸಂಬಂಧಿ ಪ್ರವೀಣ್ (20) ಸಾವಿಗೀಡಾಗಿದ್ದಾರೆ. ಬೆಳಗ್ಗೆ 4 ಘಂಟೆಯ ವೇಳೆ ಘಟನೆ ನಡೆದಿದೆ. ಧಾರಾಕಾರಿ ಮಳೆಯಾಗಿ ಹಲವೆಡೆ ನೆರೆ ಉದ್ಭವಿಸಿದ್ದರಿಂದ ರಕ್ಷಣಾ ಕಾರ್ಯ ತಡವಾಗಿದೆ. ಬೆಳಿಗ್ಗೆ 8 ಘಂಟೆಯ ಸುಮಾರಿಗೆ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದ್ದು, ಮಧ್ಯಾಹ್ನ ಒಂದು ಘಂಟೆಗೆ ನಾಲ್ಕು ಮೃತದೇಹಗಳನ್ನು ಅವಶೇಷಗಳಿಂದ ಹೊರತೆಗೆಯಲಾಯಿತು.
ಇನ್ನೊಂದೆಡೆ, ನೆರೆಯಿಂದ ಜಿಲ್ಲೆಯಲ್ಲಿ ಕೋಟ್ಯಂತರ ರೂಪಾಯಿ ಹಾನಿ ಸಂಭವಿಸಿದೆ ಎನ್ನಲಾಗಿದೆ. ತಾಲೂಕಿನ ಮುಟ್ಟಳ್ಳಿ, ಮುಂಡಳ್ಳಿ, ಚೌಥಿನಿ, ಶಿರಾಲಿ, ಪಟ್ಟಣದ ಸಂಶುದ್ದೀನ್ ವೃತ್ತ ಸೇರಿ ಅರ್ಧಕ್ಕಿಂತ ಹೆಚ್ಚಿನ ಭಟ್ಕಳದ ಪ್ರದೇಶಗಳು ನೆರೆಗೆ ತುತ್ತಾಗಿದೆ. ಚೌಥಿನಿ ಹಾಗೂ ವೆಂಕಟಾಪುರ ನದಿ ಉಕ್ಕಿ ಹರಿದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಹಲವರು ನೆರೆಗೆ ಸಿಲುಕಿ ಅಪಾಯಕ್ಕೊಳಗಾಗಿದ್ದರು. ವಿಷಯ ತಿಳಿದ ತಕ್ಷಣ ತಾಲೂಕು ಆಡಳಿತ, ಎನ್ ಡಿ ಆರ್ ಎಫ್ ತಂಡ ಅಪಾಯಕ್ಕೆ ಸಿಲುಕಿದವರನ್ನು ರಕ್ಷಣೆ ಮಾಡುವ ಕಾರ್ಯ ಮಾಡಿತ್ತು. ಬೋಟ್ಗಳ ಮೂಲಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಬರುವ ಕೆಲಸವನ್ನು ರಕ್ಷಣಾ ಸಿಬ್ಬಂದಿ ಮಾಡಿದರು.
ರಾತ್ರಿ ಹನ್ನೆರಡು ಘಂಟೆಯ ನಂತರ ಜೋರಾಗಿ ಮಳೆಯಾಗಿದ್ದು ಮೂರು ಘಂಟೆ ವೇಳೆಗೆ ಭಟ್ಕಳದಲ್ಲಿ ನೀರಿನ ಮಟ್ಟ ಏರತೊಡಗಿದೆ. ರಸ್ತೆಯಲ್ಲಿ ನಿಲ್ಲಿಸಿದ್ದ ಹಲವು ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದರೆ ಇತ್ತ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಮಧ್ಯಾಹ್ನದ ವೇಳೆಗೆ ನೆರೆ ಕಡಿಮೆಯಾಗುವ ಮೂಲಕ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.
ಇದನ್ನೂ ಓದಿ: ವಿಜಯನಗರ: ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋದ ರೈತ