ಶಿವಮೊಗ್ಗ : ಸವಾಲುಗಳನ್ನು ಸ್ವೀಕರಿಸಿ ಅವುಗಳನ್ನು ಸಾಧಿಸಿ ತೋರಿಸಿದ ಸಾಧನೆಯ ನಾಯಕ ಬಿ ಎಸ್ ಯಡಿಯೂರಪ್ಪ ಎಂದು ಮಾಜಿ ವಿಧಾನ ಪರಿಷತ್ ಸಭಾಪತಿ ಡಿ ಹೆಚ್ ಶಂಕರ ಮೂರ್ತಿ ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಬಿ ಎಸ್ ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿರುವುದರ ಕುರಿತು ಅವರು ಈಟಿವಿ ಭಾರತ್ ಜೊತೆ ಮಾತನಾಡಿದರು. ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಸಮಯದಿಂದ ಈವರೆಗೂ ಅನೇಕ ಸವಾಲುಗಳನ್ನು ಎದುರಿಸಿ ಅವುಗಳನ್ನು ಸಾಧಿಸಿ ತೋರಿಸಿದ್ದಾರೆ. ಪ್ರವಾಹದ ಸಂದರ್ಭದಲ್ಲಿ ಏಕಾಂಗಿಯಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಸುತ್ತಿ ಪ್ರವಾಹದ ಪರಿಸ್ಥಿತಿ ಅವಲೋಕಿಸಿದರು ಎಂದರು.
ಕೊರೊನಾ ಸಂದರ್ಭದಲ್ಲಿಯೂ ಸಹ ಸವಾಲನ್ನು ಎದುರಿಸಿ ಗೆದ್ದಿದ್ದಾರೆ. ಪಕ್ಷದ ಸಿದ್ದಾಂತದಂತೆ 75 ವರ್ಷ ಮೇಲ್ಪಟ್ಟವರು ರಾಜಕೀಯ ನಿವೃತ್ತಿ ಹೊಂದುವುದು ಪದ್ಧತಿ. ಅದರಂತೆ ರಾಜೀನಾಮೆ ನೀಡಿದ್ದಾರೆ. ಕೇಂದ್ರ ಮಟ್ಟದಲ್ಲೂ ಸಹ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಸೇರಿದಂತೆ ಅನೇಕ ನಾಯಕರು ರಾಜಕೀಯ ನಿವೃತ್ತಿ ಹೊಂದಿದ್ದಾರೆ. ಅದರಂತೆ ಇವರು ಯುವಕರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿ ರೈತರಿಗೆ ಕೃಷಿ ಬಜೆಟ್, ಶಾಲಾ ಮಕ್ಕಳಿಗೆ ಬೈಸಿಕಲ್, ಗೋಹತ್ಯೆ ನಿಷೇಧ ಕಾಯ್ದೆ, ಭಾಗ್ಯಲಕ್ಷ್ಮಿ ಯೋಜನೆ ಸೇರಿ ಅನೇಕ ಜನಪರ ಯೋಜನೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.
ಧನ್ಯವಾದ ಸಲ್ಲಿಸಿದ ಶಾಸಕ ಶಿವರಾಮ ಹೆಬ್ಬಾರ್
ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜೀನಾಮೆ ನೀಡುತ್ತಿದ್ದಂತೆ ಮಾಜಿ ಸಚಿವರಾಗಿರುವ ಜಿಲ್ಲೆಯ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಪಕ್ಷದ ಮುಖಂಡರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಈ ಕುರಿತು ತಮ್ಮ ಹೇಳಿಕೆಯುಳ್ಳ ವಿಡಿಯೋವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚೆಚ್ಚು ಅಭಿವೃದ್ಧಿ ಕೆಲಸಗಳು ನಡೆಯಲಿ. ಇಷ್ಟು ದಿನ ಜನರ ಸೇವೆಗೆ ಅವಕಾಶ ನೀಡಿದ ರಾಜ್ಯಾಧ್ಯಕ್ಷರು, ಮುಖಂಡರಿಗೆ ಧನ್ಯವಾದ ಎಂದು ತಿಳಿಸಿದರು.
ಕಳೆದ ಒಂದು ವರ್ಷದ 5 ತಿಂಗಳ ಕಾಲ ರಾಜ್ಯದಲ್ಲಿ ಸಚಿವನಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದ ಬಿಜೆಪಿ ಹಾಗೂ ಯಡಿಯೂರಪ್ಪನವರಿಗೆ ಅಭಿನಂದನೆಗಳು. ಅದೇ ರೀತಿ ಜಿಲ್ಲೆಯ ಜನರು, ಆಡಳಿತ ವರ್ಗ, ವಿರೋಧ ಪಕ್ಷದವರೂ ಸೇರಿ ಎಲ್ಲರೂ ಸಹಕಾರ ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳು ಆಗಲಿ ಎಂದರು.
ಓದಿ: ಆರ್ಟಿಇ 2ನೇ ಸುತ್ತಿನ ಆನ್‌ಲೈನ್ ಲಾಟರಿ ಪ್ರಕ್ರಿಯೆ: ಉಳಿಕೆಯಾಯ್ತು 6 ಸಾವಿರಕ್ಕೂ ಹೆಚ್ಚು ಸೀಟು