ಕಾರವಾರ : ಅರೆಬರೆ ಕಾಮಗಾರಿ ನಡುವೆಯೇ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುತ್ತಿಗೆ ಕಾಮಗಾರಿ ನಡೆಸಿರುವ ಐಆರ್ಬಿ ಕಂಪನಿ ಟೋಲ್ ಸಂಗ್ರಹಮಾಡುತ್ತಿದೆ. ಈ ಬಗ್ಗೆ ಕಂಪನಿಯ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನೆಸುವುದಾಗಿ ಮಾಜಿ ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.
ಕಾರವಾರದ ಮಾಜಾಳಿಯಿಂದ ಭಟ್ಕಳ ಮೂಲಕ ಕುಂದಾಪುರಕ್ಕೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೂರು ಕಡೆ ಟೋಲ್ ಸಂಗ್ರಹಿಸಲಾಗುತ್ತಿದೆ. ಇದಕ್ಕೆ ಶೇ.75ರಷ್ಟು ಕಾಮಗಾರಿ ಮುಗಿದಿದೆ ಎಂದು ಜಿಲ್ಲಾಡಳಿತಕ್ಕೆ ತಿಳಿಸಲಾಗಿದೆ. ಆದರೆ, ವಾಸ್ತವಿಕವಾಗಿ ಕಾರವಾರದಿಂದ ಅಂಕೋಲಾವರೆಗೆ ಶೇ.50ರಷ್ಟು ಕಾಮಗಾರಿ ಕೂಡ ನಡೆದಿಲ್ಲ. ಕಾರವಾರದಲ್ಲಿ ಮೇಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ.
ಆದರೆ, ಕಂಪನಿ ಮಾತ್ರ ಟೋಲ್ ಸಂಗ್ರಹ ಮಾಡುತ್ತಿದೆ. ಇದರಿಂದ ಸಾರ್ವಜನಿಕರಿಗೆ ಅನ್ಯಾಯ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಡೆಸಿದ ಸರ್ವೆ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಬೇಕು. ಇಲ್ಲವಾದಲ್ಲಿ 3ನೇ ವ್ಯಕ್ತಿಯಿಂದ ಸರ್ವೆ ಮಾಡಿಸಿ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವುದಾಗಿ ಸೈಲ್ ಹೇಳಿದರು. ಕೆಎಸ್ಆರ್‌ಟಿಸಿ ಅವರು ಪ್ರತಿ ಟೋಲ್ ಮೇಲೆ ಸಾರ್ವಜನಿಕರಿಂದ 9 ರೂ. ವಸೂಲಿ ಮಾಡುತ್ತಿದ್ದಾರೆ. ಆದರೆ, ಇದು ಪ್ರತಿ ನಿಲ್ದಾಣಕ್ಕೆ ಸಂಬಂಧಿಸಿದಂತೆ ದರ ನಿಗದಿ ಮಾಡಿಲ್ಲ.
ಬದಲಾಗಿ ಬೇಕಾ ಬಿಟ್ಟಿಯಾಗಿ ಟೋಲ್ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸರ್ಕಾರ ತಕ್ಷಣ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಸ್ಥಳೀಯರಿಗೆ ವಿನಾಯಿತಿ ನೀಡುವಂತೆ ಹಲವು ಬಾರಿ ಕಂಪನಿ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಆದರೆ, ಕೇವಲ ಸ್ಥಳೀಯ ಖಾಸಗಿ ವಾಹನಗಳಿಗೆ ಮಾತ್ರ ಉಚಿತವಾಗಿ ಬಿಡುತ್ತಿದೆ. ಸ್ಥಳೀಯ ಬಾಡಿಗೆ ಹಾಗೂ ಸಾರಿಗೆ ಬಸ್‌ಗಳಿಗೆ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.