ಭಟ್ಕಳ: ಬಿಜೆಪಿ ಎಂದರೆ ಬ್ಯುಸಿನೆಸ್ ಜನತಾ ಪಾರ್ಟಿ ಎಂಬ ವಾಖ್ಯಾನ ಸಮಂಜಸ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಭಟ್ಕಳದಲ್ಲಿ ಇಂದು (ಶನಿವಾರ) ಬ್ಲಾಕ್ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರ 10 ರೂ. ದರವನ್ನು 100 ಮಾಡಿ ಕೊನೆಯಲ್ಲಿ 20 ರೂ. ಕಡಿಮೆ ಮಾಡಿ ಲೆಕ್ಕಾಚಾರ ಮಾಡುವವರಾಗಿದ್ದಾರೆ. ಗುಜರಾತ್ನಿಂದ ಬಂದ ಹಿನ್ನೆಲೆ ಅಲ್ಲಿನವರದ್ದು, ಇದೇ ಮಾದರಿಯ ಕೆಲಸವಾಗಿದೆ.
ದೇಶವನ್ನು ಸದೃಢಗೊಳಿಸಿ ಮುನ್ನಡೆಸುವ ಕೆಲಸದ ಬದಲು 70 ವರ್ಷದ ಕಾಂಗ್ರೆಸ್ ಸರ್ಕಾರದ ಕೊಡುಗೆಯನ್ನು ಹರಾಜು ಮಾಡಿ ದಿವಾಳಿಗೆಡಿಸುವ ಕೆಲಸವನ್ನು ಪ್ರಧಾನಿ ಮೋದಿ ಮಾಡುತ್ತಿದ್ದಾರೆ. ಖಾಸಗೀಕರಣದ ಜಪ ಮಾಡಿ ಸರ್ಕಾರಿ ಸಂಸ್ಥೆ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ದೂರಿದರು.
ಪ್ರಧಾನಿ ಮೋದಿ ಅವರ ಎಲ್ಲ ಯೋಜನೆಗಳು ಬಹುತೇಕ ನಮ್ಮ ಹಣವನ್ನೇ ಬಳಸಿಕೊಂಡು ಅವರು ಪ್ರಚಾರಗಿಟ್ಟಿಸಿಕೊಳ್ಳುವುದಾಗಿದೆ. ಬೇಟಿ ಪಡಾವೋ- ಬೇಟಿ ಬಚಾವೋ, ಸ್ವಚ್ಛ ಭಾರತ ಅಭಿಯಾನದಲ್ಲಿ ಕಸ ಗುಡಿಸುವುದು, ಕಸಬರಿಗೆ ನಮ್ಮದು ಆದರೆ, ಬ್ಯಾನರ್ನಲ್ಲಿ ಹೆಸರು, ಫೋಟೋ ಅವರದ್ದಾಗಿದೆ. ಜನರಿಗೆ ಪ್ರಚಾರದ ಗೀಳು ಹತ್ತಿಸಿ ತಪ್ಪು ದಾರಿಗೆ ಹಿಡಿಸುವುದು ಬಿಜೆಪಿಯ ಸಿದ್ದಾಂತವಾಗಿದೆ ಎಂದು ವಾಗ್ದಾಳಿ ನಡೆಸಿದರು.
ನರೇಂದ್ರ ಮೋದಿ ಅವರನ್ನ ಬಿಜೆಪಿಯವರು ದೇವರಂತೆ ಪೂಜಿಸುತ್ತಿದ್ದರು. ಆದರೆ, ಕೃಷಿ ಕಾಯ್ದೆ ವಾಪಸಾತಿಯಿಂದ ಅವರು ರೈತರಲ್ಲಿ ಕ್ಷಮೆ ಕೇಳುವಂತಾಗಿದೆ. ಕಾಯ್ದೆ ವಿರುದ್ಧ ಹೋರಾಟ ಮಾಡಿ ಮೃತಪಟ್ಟ 700 - 800 ಮಂದಿ ಜನರ ಸಾವಿಗೆ ಬಿಜೆಪಿಯಲ್ಲಿ ಮರುಕವಿಲ್ಲ, ನೋವಿಲ್ಲ.
ಚುನಾವಣೆ ಸೋತ ಮೇಲೆ ತಕ್ಷಣಕ್ಕೆ ರೈತರ ಕೃಷಿ ಕಾಯ್ದೆ ವಾಪಸ್ ಹಾಗು ಪೆಟ್ರೋಲ್, ಡಿಸೇಲ್ ದರ ಇಳಿಕೆ ಮಾಡುವ ಮೂಲಕ ಇವರು ಜನಪರ ಬದಲು ವ್ಯವಹಾರಿಕ ರೀತಿಯಲ್ಲಿ ದೇಶ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದರು.
ಇದನ್ನೂ ಓದಿ: ಬಿಜೆಪಿಯವರು ನನ್ನ ಸಂಪರ್ಕದಲ್ಲಿದ್ದಾರೆ : ಲಕ್ಷ್ಮಿ ಹೆಬ್ಬಾಳ್ಕರ್ ಬಾಂಬ್