ಕಾರವಾರ (ಉತ್ತರ ಕನ್ನಡ): ಹಳಿಯಾಳ ಅರಣ್ಯ ವಿಭಾಗದ ದಿನಗೂಲಿ ನೌಕರ, ಹವ್ಯಾಸಿ ಉರಗ ಸಂರಕ್ಷಕ ಪರಶುರಾಮ ನಾರಾಯಣ ತೋರಸ್ಕರ ಎಂಬವರನ್ನು ಹಳಿಯಾಳ ತಾಲೂಕಿನ ಕರ್ಲಕಟ್ಟಾ ಗ್ರಾಮ ವ್ಯಾಪ್ತಿಯಲ್ಲಿರುವ ಹೊಲದಲ್ಲಿ ಎರಡೂ ಕಾಲುಗಳನ್ನು ಕಡಿದು ಭೀಕರವಾಗಿ ಕೊಲೆ ಮಾಡಲಾಗಿದೆ. ಕೃಷಿ ಜಮೀನಿನ ವ್ಯಾಜ್ಯವೇ ಕೊಲೆಗೆ ಕಾರಣವೆಂದು ಹೇಳಲಾಗುತ್ತಿದೆ.
ಕರ್ಲಕಟ್ಟಾ ಗ್ರಾಮದಲ್ಲಿ ಮೂರು ಎಕರೆ ಕೃಷಿ ಜಮೀನಿಗೆ ಸಂಬಂಧಿಸಿದಂತೆ ಕೊಲೆಯಾದ ಪರಶುರಾಮ ತೋರಸ್ಕರ ಹಾಗೂ ಸಹದೇವ ಹನುಮಂತ ದಡ್ಡಿಕರ ಎಂಬವರ ಮಧ್ಯೆ ಗಲಾಟೆ ಆರಂಭಗೊಂಡಿತ್ತು. ಜಮೀನು ವ್ಯಾಜ್ಯದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಗುರುವಾರ ಇದೇ ವಿವಾದಿತ ಕೃಷಿ ಜಮೀನಿನಲ್ಲಿಯೇ ಪರಶುರಾಮರ ಕಾಲು ಕತ್ತರಿಸಿದ್ದು ತೀವ್ರ ರಕ್ತಸ್ರಾವವಾಗಿ ಹೊಲದಲ್ಲಿಯೇ ಸಾವನ್ನಪ್ಪಿದ್ದಾರೆ.
ಪ್ರಕರಣದ ಕುರಿತು ಮೃತರ ಸಹೋದರ ತುಕಾರಾಮ ನಾರಾಯಣ ತೋರಸ್ಕರ ಹಳಿಯಾಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎಸ್.ಪಿ.ವಿಷ್ಣುವರ್ದನ.ಎಸ್. ಹಳಿಯಾಳ ಠಾಣೆಗೆ ಸಂಜೆ ಭೇಟಿ ನೀಡಿ ಮಾಹಿತಿ ಪಡೆದು ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ದಾಂಡೇಲಿ ಡಿವೈಎಸ್ಪಿ ಶಿವಾನಂದ ಕಟಗಿ ಮಾರ್ಗದರ್ಶನದಲ್ಲಿ ಹಳಿಯಾಳ ಸಿಪಿಐ ಸುರೇಶ ಶಿಂಗಿಯವರ ಮುಂದಾಳತ್ವದಲ್ಲಿ ಪಿಎಸೈ ವಿನೋದ ರೆಡ್ಡಿ, ಅಪರಾಧ ವಿಭಾಗದ ಪಿಎಸೈ ಅಮಿತ ಅತ್ತಾರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ತಂಡ ಆರೋಪಿಗಳಿಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಮದ್ದೂರಿನಲ್ಲಿ ಸಿಡಿಲು ಬಡಿದು ಇಬ್ಬರು ಸಾವು; ನೆಲಕ್ಕುರುಳಿದ ಮರ, ವಿದ್ಯುತ್ ಕಂಬಗಳು
ಕಲಬುರಗಿಯಲ್ಲಿ ಬಸ್ ಡ್ರೈವರ್ ಹತ್ಯೆ: ನಿನ್ನೆ (ಗುರುವಾರ) ಹಾಡಹಗಲೇ ಬಸ್ ನಿಲ್ದಾಣದಲ್ಲಿ ಚಾಲಕರೊಬ್ಬರನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆಗೈದಿರುವ ಘಟನೆ ಕಲಬುರಗಿ ಸಿಟಿ ಬಸ್ ನಿಲ್ದಾಣದಲ್ಲಿ ನಡೆದಿತ್ತು. ಕೆಕೆಆರ್‌ಟಿಸಿ ಬಸ್ ಚಾಲಕ ನಾಗಯ್ಯಸ್ವಾಮಿ (45) ಹತ್ಯೆಗೀಡಾದ ವ್ಯಕ್ತಿ.
ಮಧ್ಯಾಹ್ನ 1-30 ರ ಸುಮಾರಿಗೆ ಮಿನಜಗಿಯಿಂದ ಸೂಪರ್ ಮಾರ್ಕೆಟ್ ಸಿಟಿ ಬಸ್ ನಿಲ್ದಾಣದಕ್ಕೆ ಸಾರಿಗೆ ಬಸ್ ಚಲಾಯಿಸಿಕೊಂಡು ಬಂದಿದ್ದರು. ಬಸ್‌ನಿಂದ ಕೆಳಗೆ ಇಳಿಯುತ್ತಿದ್ದಂತೆ ಮೂವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು. ದಾಳಿಯಲ್ಲಿ ಕೈ ಹೆಬ್ಬೆರಳು ತುಂಡಾಗ್ತಿದ್ದಂತೆ ಬಸ್ ನಿಲ್ದಾಣ ಒಳಗೆ ಓಡಿದ ನಾಗಯ್ಯಸ್ವಾಮಿಯನ್ನು ಬೆನ್ನಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದು ಕೊಲೆಗಡುಕರು ಪರಾರಿಯಾಗಿದ್ದರು. ಹೋಗುವಾಗ ಕೊಂಚ ದೂರದಲ್ಲಿ ನಿಂತಿದ್ದ ಬಸ್‌ವೊಂದರ ಬಳಿಯೇ ಮಾರಕಾಸ್ತ್ರ ಎಸೆದು ಪರಾರಿಯಾಗಿದ್ದರು.
ಇದನ್ನೂ ಓದಿ: ಯಲ್ಲಾಪುರ: ಬಾವಿಗೆ ಇಳಿದವನ ರಕ್ಷಣೆಗೆ ಮುಂದಾದ ಇಬ್ಬರು ಸೇರಿ ಮೂವರೂ ಸಾವು