ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸೌಂದರ್ಯ ಸವಿಯಲು ವಿದೇಶಗಳಿಂದ ಪ್ರವಾಸಿಗರು ಆಗಮಿಸುವುದು ಸಾಮಾನ್ಯ. ಹೀಗೆ ಬಂದಂತಹ ಪ್ರವಾಸಿಗರು ಇಲ್ಲಿಯೇ ಬೀಡುಬಿಟ್ಟು ವ್ಯಾಪಾರ ಸೇರಿದಂತೆ ಒಂದಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದೀಗ ಗೋಕರ್ಣದಲ್ಲಿ ವಿದೇಶಿ ಮಹಿಳೆಯೋರ್ವಳು ರಸ್ತೆ ಬದಿಯಲ್ಲಿ ಪಿಟೀಲು (ವಯಲಿನ್) ನುಡಿಸುತ್ತಾ ಕಾಸು ಸಂಪಾದಿಸುತ್ತಿರುವುದು ಗಮನ ಸೆಳೆದಿದೆ.
ಸಾಮಾನ್ಯವಾಗಿ ವಿದೇಶಕ್ಕೆ ಉದ್ಯೋಗ ಅರಸಿ ಹೋಗುವವರು ಉದ್ಯೋಗದಲ್ಲಿ ನಿರತರಾಗುತ್ತಾರೆ. ಪ್ರವಾಸಕ್ಕಾಗಿ ಹೋದವರು ಪ್ರವಾಸ ಸ್ಥಳಗಳಿಗೆ ಭೇಟಿ ನೀಡಿ ಬರುತ್ತಾರೆ. ಆದರೆ ಧಾರ್ಮಿಕ ಹಾಗೂ ಪ್ರವಾಸಿ ಕ್ಷೇತ್ರವಾಗಿರುವ ಕುಮಟಾ ತಾಲ್ಲೂಕಿನ ಗೋಕರ್ಣಕ್ಕೆ ಬರುವ ವಿದೇಶಿಗರು ವಿವಿಧ ಬಗೆಯಲ್ಲಿ ಹಣ ಸಂಪಾದನೆಗೆ ಮುಂದಾಗಿದ್ದಾರೆ.
ಕಳೆದೆರಡು ದಿನಗಳಿಂದ ವಿದೇಶಿ ಪ್ರವಾಸಿ ಮಹಿಳೆಯೊಬ್ಬರು ಚಿಕ್ಕ ಪಿಟೀಲು ನುಡಿಸುತ್ತಾ ಅಲ್ಲಲ್ಲಿ ನಿಂತು ಹಣ ಪಡೆಯುತ್ತಿರುವುದು ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ಕುತೂಹಲ ಮೂಡಿಸಿತು. ಸಾರ್ವಜನಿಕ ಸ್ಥಳದಲ್ಲಿ ನಿಂತು ತನ್ನ ವಯಲಿನ್ ತುಂಬುವ ಪೆಟ್ಟಿಗೆಯನ್ನು ನೆಲದ ಮೇಲಿಟ್ಟು ತಾವೇ ಮೊದಲು ಅದಕ್ಕೆ ಹಣ ಹಾಕಿ ಜನರೂ ತಮ್ಮಿಷ್ಟದ ಹಣ ನೀಡುವಂತೆ ಸೂಚಿಸಿದರು. ಕೆಲಹೊತ್ತು ಪಿಟೀಲು ಬಾರಿಸುವ ಮೂಲಕ ಜನರನ್ನು ಆಕರ್ಷಿಸಿ ಆ ಮೂಲಕ ಹಣಗಳಿಕೆಯ ಹಾದಿ ಕಂಡುಕೊಂಡರು.
ವಿದೇಶದಲ್ಲಿದು ಕಾಮನ್: ವಿದೇಶಗಳಲ್ಲಿ ಈ ರೀತಿ ಹೊಟ್ಟೆಪಾಡಿಗಾಗಿ ಸಾರ್ವಜನಿಕವಾಗಿ ಸಂಗೀತ ವಾದ್ಯ ನುಡಿಸಿ, ಮನರಂಜನಾ ಕಾರ್ಯಕ್ರಮ ನೀಡಿ ಪ್ರೇಕ್ಷಕರಿಂದ ಹಣ ಪಡೆಯುವುದು ಕಾಮನ್. ಆದರೆ ಇತ್ತೀಚಿಗೆ ವಿದೇಶದ ಈ ಸಂಸ್ಕೃತಿ ಗೋಕರ್ಣವನ್ನೂ ತಲುಪಿತೇ ಎನ್ನುವಂತೆ ಭಾಸವಾಗುತ್ತಿದೆ. ಈಗಾಗಲೇ ಇಲ್ಲಿನ ಕುಡ್ಲೇ ಕಡಲತೀರ ಬಹುತೇಕ ವಿದೇಶಿಗರ ತಾಣವಾಗಿ ಮಾರ್ಪಾಟಾಗಿದೆ.
ಇಲ್ಲಿ ವಾರಕ್ಕೊಮ್ಮೆ ವಿದೇಶಿಗರೇ ವ್ಯಾಪಾರ ವಹಿವಾಟು ನಡೆಸುವ ಸಂತೆಯೂ ನಡೆಯುತ್ತಿದೆ. ಪ್ರವಾಸಕ್ಕೆ ಬಂದು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ವಿದೇಶಿಗರು ಹಣಗಳಿಕೆಗೆ ಕಂಡುಕೊಂಡ ಹಾದಿಯಂತೆ ಇದು ತೋರುತ್ತದೆ. ಕೊರೊನಾ ಅವಧಿಯಲ್ಲಿ ಗೋಕರ್ಣದಲ್ಲಿ ಸಿಲುಕಿಕೊಂಡಿದ್ದ ವಿದೇಶಿಗರು ಇಲ್ಲಿಯೇ ವಿವಿಧ ರೀತಿಯ ವ್ಯಾಪಾರ-ವಹಿವಾಟುಗಳಲ್ಲಿ ತೊಡಗಿಸಿಕೊಂಡು ದಿನ ಕಳೆದ ನಿದರ್ಶನಗಳಿವೆ.
ಸಾರ್ವಜನಿಕರು ಹೇಳುವುದೇನು?: ಬೇರೆ ದೇಶಗಳಲ್ಲಿ ಯಾವ ಉದ್ದೇಶದಿಂದ ನಾವು ತೆರಳುತ್ತೇವೆಯೂ ಅದನ್ನೇ ಮಾಡಬೇಕು. ಆದರೆ ನಮ್ಮ ದೇಶಕ್ಕೆ ಪ್ರವಾಸಿ ವೀಸಾದಲ್ಲಿ ಬರುವ ವಿದೇಶಿಗರು ಬಿಂದಾಸ್ ಆಗಿ ಯಾವುದೇ ಚಟುವಟಿಕೆಯಲ್ಲಿ ತೊಡಗಿದರೂ ಯಾರೂ ಕೇಳುವವರೇ ಇಲ್ಲದಾಗಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆ ನಿಗಾವಹಿಸಿ ಕ್ರಮ ತೆಗೆದುಕೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಉತ್ತರ ಕನ್ನಡಕ್ಕೆ ಪ್ರವಾಸಿಗರ ದಂಡು: ಜಿಲ್ಲೆಯಲ್ಲಿ ಮುರುಡೇಶ್ವರ, ಗೋಕರ್ಣ, ಕಾರವಾರ, ದಾಂಡೇಲಿಯಲ್ಲಿರುವ ಹೋಂ ಸ್ಟೇ ಮತ್ತು ಜಲಸಾಹಸಿ ಕ್ರೀಡೆಗಾಗಿ ಪ್ರವಾಸಿಗರ ದಂಡು ಹರಿದು ಬರುತ್ತಲೇ ಇರುತ್ತದೆ. ಇಲ್ಲಿ ಧಾರ್ಮಿಕ ಕ್ಷೇತ್ರವಲ್ಲದೇ ವಿಶೇಷವಾಗಿ ಕಡಲತೀರವಿರುವುದರಿಂದ ಪ್ರವಾಸಿಗರು ಹೆಚ್ಚು ಆಕರ್ಷಿತರಾಗುತ್ತಾರೆ. ವರದಿಯ ಪ್ರಕಾರ, ಅಂದಾಜು ಒಂದು ವರ್ಷಕ್ಕೆ 1 ಕೋಟಿಗೂ ಅಧಿಕ ಪ್ರವಾಸಿಗರು ದೇಶ ವಿದೇಶದಿಂದ ಇಲ್ಲಿಗೆ ಆಗಮಿಸುತ್ತಾರೆ.
ಇದನ್ನೂ ಓದಿ: ಕಾರವಾರ: ಅದ್ದೂರಿಯಾಗಿ ನಡೆದ ಗುಡ್ಡದ ತುದಿಯ ಶಿರ್ವೆ ಜಾತ್ರೆ.. Watch