ಕಾರವಾರ: ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಳೆ ಆರ್ಭಟ ಜೋರಾಗಿದೆ. ಕಳೆದ ಎರಡು ದಿನದಿಂದ ಬಿಡದೇ ಸುರಿಯುತ್ತಿರುವ ಭಾರಿ ಮಳೆಗೆ ಗ್ರಾಮೀಣ ಭಾಗದಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜಲಪ್ರವಾಹ ಸೃಷ್ಟಿಯಾಗಿ, ಜನಜೀವನ ಅಸ್ತವ್ಯಸ್ಥಗೊಂಡಿದೆ.
ಕರಾವಳಿಯಲ್ಲಿ ಅಬ್ಬರಿಸುತ್ತಿರುವ ಧಾರಾಕಾರ ಮಳೆಯಿಂದಾಗಿ ಕರಾವಳಿ ತೀರದ ತಾಲೂಕುಗಳು ಅಕ್ಷರಶಃ ಜಲಾವೃತ್ತವಾಗಿವೆ. ಭಾರೀ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು ಜನವಸತಿ ಪ್ರದೇಶಗಳು ನೀರು ತುಂಬಿಕೊಂಡು ಕೆರೆಯಂತಾಗಿವೆ. ಕರಾವಳಿ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಸಾಕಷ್ಟು ಅವಾಂತರಗಳನ್ನ ಸೃಷ್ಟಿಸಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ನಿನ್ನೆ ತಡರಾತ್ರಿಯಿಂದ ಮಳೆಯ ಪ್ರಮಾಣ ಹೆಚ್ಚಾಗಿದ್ದು ಕುಮಟಾ ತಾಲೂಕಿನ ಬಡಗಣಿ ಹಳ್ಳ ಉಕ್ಕಿ ಹರಿದ ಪರಿಣಾಮ ಕೂಜಳ್ಳಿ, ಕೋನಳ್ಳಿ, ಚಂದಾವರ ಗ್ರಾಮಗಳ ಮನೆಗಳಿಗೆ ನೀರು ನುಗ್ಗಿದೆ. ನಿರಂತರವಾಗಿ ಮಳೆ ಸುರಿಯುತ್ತಿದ್ದು ಗ್ರಾಮೀಣ ಪ್ರದೇಶಗಳು ಕೆರೆಯಂತಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ಕಾರವಾರ ನಗರದ ವಿವಿಧೆಡೆ ಸಹ ಮಳೆಯ ನೀರು ನಿಂತ ಪರಿಣಾಮ ತಗ್ಗು ಪ್ರದೇಶಗಳಿಗೆ ನೀರು ಹರಿದು ಮನೆಗಳು ಜಲಾವೃತಗೊಂಡಿವೆ. ಪ್ರತಿ ವರ್ಷ ಮಳೆಗಾಲದಲ್ಲಿ ಹಳ್ಳದಲ್ಲಿ ನೀರು ತುಂಬಿ ಅನಾವೃಷ್ಟಿ ಸೃಷ್ಟಿಸುತ್ತಿದ್ದರು ಈ ಬಗ್ಗೆ ಯಾವುದೇ ಶಾಸ್ವತ ಪರಿಹಾರ ಸಿಕ್ಕಿಲ್ಲ. ಇಲ್ಲಿನ ಬಡಗಣಿ ಹಳ್ಳದಲ್ಲಿ ಹೂಳು ತುಂಬಿಕೊಂಡ ಕಾರಣ ಇಂತಹದೊಂದು ಸಮಸ್ಯೆ ಹಲವು ವರ್ಷಗಳಿಂದ ಮುಂದುವರಿದಿದೆ.
ಆದರೆ ನೆಪ ಮಾತ್ರಕ್ಕೆ ಪ್ರವಾಹ ಪೀಡಿತ ಸ್ಥಳಗಳಿಗೆ ಬರುವ ಅಧಿಕಾರಿಗಳು ದೂರಿಂದಲೆ ಸಮೀಕ್ಷೆ ನಡೆಸಿ ತೆರಳುತ್ತಿದ್ದಾರೆ. ಇನ್ನಾದರೂ ಜಿಲ್ಲಾಧಿಕಾರಿ ಈ ಬಗ್ಗೆ ಶಾಸ್ವತ ಕ್ರಮ ಕೈಗೊಂಡು ಸೂಕ್ತ ಪರಿಹಾರ ನೀಡುವರೆಗೂ ನಾವು ಇರುವ ಸ್ಥಳಗಳಿಂದ ತೆರಳುವುದಿಲ್ಲ ಎನ್ನುತ್ತಾರೆ ಸ್ಥಳೀಯರಾದ ರಾಮ ನಾಯ್ಕ.
ಕರಾವಳಿಯಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆಯಿದೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಮೀನುಗಾರಿಕೆಗಾಗಿ ಕಡಲಿಗಿಳಿಯದಂತೆ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದ್ದು ಜಿಲ್ಲೆಯ ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎನ್ನುತ್ತಾರೆ ಮೀನುಗಾರಿಕೆ ಇಲಾಖೆ ಉಪನಿರ್ದೇಶಕರಾದ ನಾಗರಾಜ.
ಕರಾವಳಿಯಲ್ಲಿ ಮಳೆ ಮುಂದುವರೆದ ಹಿನ್ನೆಲೆಯಲ್ಲಿ ಜಿಲ್ಲೆಯ ಕರಾವಳಿ ತಾಲೂಕುಗಳ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಒಂದು ದಿನದ ರಜೆಯನ್ನ ನೀಡಲಾಗಿದೆ. ಇನ್ನು ತಾಲೂಕುಗಳಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಅಲರ್ಟ್ ಇರುವಂತೆ ಸೂಚನೆ ನೀಡಲಾಗಿದ್ದು, ತುರ್ತು ಸಂದರ್ಭಗಳಲ್ಲಿ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದು, ನೆರೆಪಿಡಿತ ಪ್ರದೇಶಗಳಿಗೆ ಆಯಾ ತಾಲೂಕು ತಹಶೀಲ್ದಾರರು ಹಾಗೂ ಪೊಲೀಸ್ ಮತ್ತು ಅಗ್ನಿಶಾಮಕದಳದ ಸಿಬ್ಬಂದಿ ಬೀಡುಬಿಟ್ಟು ಮುಂಜಾಗ್ರತೆ ವಹಿಸಿದ್ದಾರೆ.