ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಉಂಟಾದ ಪ್ರವಾಹಕ್ಕೆ ಜನರು ತತ್ತರಿಸಿದ್ದಾರೆ. ಜಿಲ್ಲೆಯಲ್ಲಿ ಹಿಂದೆಂದೂ ಕಂಡರಿಯದ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಲವು ಮನೆಗಳು ನೀರು ಪಾಲಾಗಿವೆ. ಕಷ್ಟಪಟ್ಟು ದುಡಿದು ಸಂಗ್ರಹಿಸಿದ ಬೆಳೆ ಕಾಳುಗಳು ನೀರುಪಾಲಾಗಿದ್ದು, ಮನೆಯಲ್ಲಿನ ಬಟ್ಟೆಬರೆ ಕಳೆದುಕೊಂಡ ಜನರು ಜೀವ ರಕ್ಷಿಸಿಕೊಳ್ಳಲು ಇದೀಗ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.
ಕರಾವಳಿ ತಾಲೂಕುಗಳಾದ ಕಾರವಾರ ಮತ್ತು ಅಂಕೋಲಾ ಅಕ್ಷರಶಃ ಮುಳುಗಿ ಹೋಗಿವೆ. ಗಂಗಾವಳಿ ನದಿಯಲ್ಲಿ ಪ್ರವಾಹ ಬಂದಿದ್ದರಿಂದ ಹತ್ತಾರು ಗ್ರಾಮಗಳು ಜಲಾವೃತವಾಗಿವೆ. ಕಾರವಾರದ ಕಾಳಿ ನದಿ ನೀರು ಕೂಡ ಹೆಚ್ಚಾಗಿದ್ದು, ಹಲವು ಗ್ರಾಮಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಾವಿರಕ್ಕೂ ಹೆಚ್ಚು ಮಂದಿ ಕಾಳಜಿ ಕೇಂದ್ರದಲ್ಲಿ ಆಶ್ರಯ:
ನದಿ ನೀರಿನ ಪ್ರವಾಹದಿಂದ ಜನರು ಮನೆ, ಆಸ್ತಿಪಾಸ್ತಿ ಕಳೆದುಕೊಂಡಿದ್ದು, ಜೀವ ರಕ್ಷಣೆಗಾಗಿ ಕಾಳಜಿ ಕೇಂದ್ರ ಸೇರಿಕೊಂಡಿದ್ದಾರೆ. ಅಂಕೋಲಾದಲ್ಲಿ 32, ಕಾರವಾರದಲ್ಲಿ 27, ಕುಮಟಾದಲ್ಲಿ 9, ಸಿದ್ದಾಪುರ 5, ದಾಂಡೇಲಿಯಲ್ಲಿ 3 ಸೇರಿದಂತೆ ಒಟ್ಟು 82 ಗ್ರಾಮಗಳು ಮುಳುಗಡೆ ಗ್ರಾಮಗಳಾಗಿವೆ. ಒಟ್ಟು 12,518 ಜನರು ಸಂತ್ರಸ್ಥರಾಗಿದ್ದಾರೆ. ಅಂಕೋಲಾದಲ್ಲಿ 38, ಕಾರವಾರದಲ್ಲಿ 25 ಮತ್ತು ಕುಮಟಾದಲ್ಲಿ 18 ಸೇರಿ ಒಟ್ಟು 93 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಒಟ್ಟು ಸಾವಿರಕ್ಕೂ ಹೆಚ್ಚು ಮಂದಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.
155 ಜನರ ರಕ್ಷಣೆ:
ಅಂಕೋಲಾದ ಸರಳೆಬೈಲ್, ಹೊನ್ನಳ್ಳಿ, ಹಿಚ್ಕಡ, ವಾಸರಕುದ್ರಗಿ, ಶಿರೂರು ಸೇರಿದಂತೆ ಇತರೆಡೆ ಕಾಳಜಿ ಕೇಂದ್ರ ತೆರೆಯಲಾಗಿದೆ. ಕಾರವಾರದ ಕದ್ರಾ, ಉಮಳಿಜೂಗ್, ಬೋಡ್ ಜೂಗ್, ಖಾರ್ಗಾಜೂಗ್, ಕದ್ರಾ ಸೇರಿದಂತೆ ಇತರೆಡೆ ನೀರು ತುಂಬಿದ್ದರಿಂದ ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ 155 ಜನರನ್ನು ರಕ್ಷಣೆ ಮಾಡಿ ಕಾಳಜಿ ಕೇಂದ್ರಕ್ಕೆ ಕರೆತಂದಿದ್ದಾರೆ.
ನೌಕಾನೆಲೆ ರಕ್ಷಣಾ ಪಡೆ ಸಿಬ್ಬಂದಿ ಶಿನಗುಡ್ಡ, ಭೈರೆ ಗ್ರಾಮಗಳಿಂದ ನೂರಾರು ಜನರನ್ನ ರಕ್ಷಣೆ ಮಾಡಿದ್ದಾರೆ. ಕದ್ರಾ, ಕೊಡಸಳ್ಳಿ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಾಗಿದ್ದರಿಂದ ಎಲ್ಲಾ ಗೇಟ್ಗಳನ್ನ ತೆರೆದು ಸುಮಾರು 2 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತದೆ. ನದಿಯ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಮನೆಗಳು ಸಂಪೂರ್ಣ ಮುಳುಗಿವೆ. ಒಂದೊಂದೆ ಮನೆಗಳು ನೀರಿನಲ್ಲಿ ಕುಸಿದು ಬೀಳುತ್ತಿದ್ದು, ಮನೆಯಲ್ಲಿ ಸಂಗ್ರಹಿಸಿದ ಬೆಳೆ ಕಾಳುಗಳು ನೀರು ಪಾಲಾಗಿವೆ.
ಸೂಕ್ತ ಪರಿಹಾರಕ್ಕೆ ಮನವಿ:
ಕೃಷಿ ಭೂಮಿಯಲ್ಲಿ ನೀರು ತುಂಬಿದ್ದರಿಂದ ಜನತೆ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಪ್ರಾಣ ರಕ್ಷಣೆಗಾಗಿ ಜನತೆ ಮನೆಯಲ್ಲಿರುವ ವಸ್ತುಗಳನ್ನ ರಕ್ಷಿಸಿಕೊಳ್ಳಲಾಗದೆ ಅಸಹಾಯಕರಾಗಿದ್ದಾರೆ. ಮಹಿಳೆಯರು, ಮಕ್ಕಳು ವೃದ್ಧರು ತನ್ನ ಜೀವವನ್ನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲವನ್ನ ತೊರೆದು ಬಂದಿದ್ದಾರೆ. ಹೀಗಾಗಿ ಸರ್ಕಾರ ತಮಗೆ ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ ಕಳೆದ ಕೆಲ ದಶಕಗಳ ಬಳಿಕ ಅಂಕೋಲಾ ಮತ್ತು ಕಾರವಾರದ ನದಿಗಳು ಉಕ್ಕಿ ಹರಿದಿದ್ದು, ಜನರ ಆತಂಕವನ್ನು ಹೆಚ್ಚಿಸಿದೆ. ಕುಮಟಾದ ಅಘನಾಶಿನಿ ನದಿ ಕೂಡ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹಲವು ಜನರ ಸಂತ್ರಸ್ತರಾಗಿದ್ದಾರೆ. ಘಟ್ಟದ ಮೇಲ್ಬಾಗದಲ್ಲಿ ಅತ್ಯಧಿಕ ಮಳೆಯಾಗಿದ್ದರಿಂದ ಸರ್ವಸ್ವವನ್ನೂ ಕಳೆದುಕೊಂಡ ಕರಾವಳಿ ಜನತೆ ಕಂಗಾಲಾಗಿದ್ದಾರೆ.
ಇದನ್ನೂ ಓದಿ: ಮಳೆಗೆ ಕುಂದಾನಗರಿ ತತ್ತರ... ಶಾಶ್ವತ ಪರಿಹಾರಕ್ಕೆ ಸಂತ್ರಸ್ತರ ಒತ್ತಾಯ