ಕಾರವಾರ: ಒಂದೆಡೆ ಕುಸಿದು ಬಿದ್ದ ಮನೆಗಳು, ಇನ್ನೊಂದೆಡೆ ನೆರೆಯಿಂದಾಗಿ ಮನೆಯಲ್ಲಿ ಅಳಿದುಳಿದ ಸಾಮಾನುಗಳನ್ನು ಸ್ವಚ್ಛಗೊಳಿಸುತ್ತಿರುವ ಜನ. ಮತ್ತೊಂದೆಡೆ ಬದುಕಿಗೆ ಆಧಾರವಾಗಿದ್ದ ಮನೆ, ಅಂಗಡಿಗಳನ್ನು ಕಳೆದುಕೊಂಡು ಕಣ್ಣೀರಿಡುತ್ತೀರುವ ಜನರು. ಈ ಎಲ್ಲ ದೃಶ್ಯಗಳನ್ನು ನೋಡಿದರೇ ಅಯ್ಯೋ ಎನ್ನಿಸದೆ ಇರದು..!
ಹೌದು, ಮಹಾಮಳೆಗೆ ನಲುಗಿದ್ದ ಕಾರವಾರ ತಾಲ್ಲೂಕಿನ ಮಲ್ಲಾಪುರ ಪಂಚಾಯಿತಿ ವ್ಯಾಪ್ತಿಯ ಕೈಗಾ ಬಜಾರ್, ಕುರ್ನಿಪೇಟೆ, ಮಲ್ಲಾಪುರ ಜನರ ಬದುಕು ಇದೀಗ ಬೀದಿಗೆ ಬಂದಿದೆ. ಆರೇಳು ದಿನಗಳ ಕಾಲ ನೀರಲ್ಲಿ ಮುಳುಗಿದ್ದ ಮನೆ ಅಂಗಡಿಗಳು ನೆಲಸಮವಾಗಿದೆ. ಮನೆ, ಅಂಗಡಿ, ಹೊಟೇಲ್, ಬಸ್ ನಿಲ್ದಾಣ ಎಲ್ಲವೂ ಹಾನಿಯಾಗಿವೆ. ಇನ್ನು ಮನೆ ಅಂಗಡಿಗಳಿಗೆ ಕೆಸರು, ಕಸ ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ತುಂಬಿಕೊಂಡಿದ್ದು, ಈ ಭಾಗದಲ್ಲಿ ಮುಗು ಬಿಟ್ಟು ಓಡಾಡಲಾಗದಷ್ಟು ಗಬ್ಬು ವಾಸನೆ ಹೊಡೆಯುತ್ತಿದೆ.
ಕದ್ರಾ ಜಲಾಶಯದಿಂದ ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಈ ಎಲ್ಲ ಗ್ರಾಮಗಳಿಗೂ ಅತಿ ಹೆಚ್ಚು ಹಾನಿಯಾಗಿದೆ. ಇದೀಗ ಗ್ರಾಮಸ್ಥರ ಬಳಿ ಉಟ್ಟ ಬಟ್ಟೆ ಬಿಟ್ಟು ಬೇರೆ ಏನು ಇಲ್ಲ. ಸರ್ವಸ್ವವನ್ನು ಕಳೆದುಕೊಂಡು ಇದೀಗ ಪರಿಹಾರ ಕೇಂದ್ರಗಳಲ್ಲಿ ವಾಸವಾಗಿದ್ದಾರೆ. ನೆರೆಯಿಂದ ಮನೆಗಳನ್ನು ಕಳೆದುಕೊಂಡವರಿಗೆ ಸರ್ಕಾರವೇ ದಾರಿ ತೋರಬೇಕು ಎನ್ನುತ್ತಾರೆ ಸ್ಥಳೀಯರಾದ ರಾಜೇಶ ನಾಯ್ಕ.
ಇನ್ನು ಕಾಳಿ ನದಿಯಂಚಿಗೆ ನೆಲಸಿದ ಜನರಿಗೆ ಎಂದೂ ಕೂಡ ಇಂತಹ ಸ್ಥಿತಿ ಬಂದಿರಲಿಲ್ಲ. ಜಲಾಶಯದ ನೀರು ಬಿಟ್ಟಾಗ ಮನೆವರೆಗೆ ಮಾತ್ರ ಬರುತಿತ್ತು. ಆದರೆ ಈ ಭಾರಿ ಅಧಿಕಾರಿಗಳ ಬೇಜವಬ್ದಾರಿ ಹಾಗೂ ನಿರ್ಲಕ್ಷ್ಯಕ್ಕೆ ನಮ್ಮಂತ ಅಮಾಯಕರು ಬಲಿಯಾಗಿದ್ದೇವೆ. ಇಷ್ಟೊಂದು ನೀರು ಹರಿಸುವ ಬಗ್ಗೆ ಯಾವುದೇ ಮುನ್ಸೂಚನೆ ಕೂಡ ನೀಡಿರಲಿಲ್ಲ ಎಂದು ಆರೋಪಿಸಿದರು.
ಹಿಂದೊಮ್ಮೆ ಕದ್ರಾ ಜಲಾಶಯ ನಿರ್ಮಾಣದಿಂದಾಗಿ ನಿರಾಶ್ರಿತರಾದವರೇ ಇದೀಗ ಮತ್ತೆ ಎಲ್ಲವನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಇದಕ್ಕೆ ಕೆಪಿಸಿ ಅಧಿಕಾರಿಗಳು ಕೂಡ ಹೊಣೆ. 35 ವರ್ಷಗಳು ಕಳೆದರು ಜನರಿಗೆ ಶಾಸ್ವತ ಪುನರ್ವಸತಿ ಕಲ್ಪಿಸಿಲ್ಲ. ಪ್ರತಿನಿತ್ಯ ಆತಂಕದಿಂದಲೇ ಜನರು ಬದುಕಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ ಸ್ಥಳೀಯರಾದ ಬಾಬು ನಾಯ್ಕ.
ಒಟ್ಟಿನಲ್ಲಿ ಮಳೆ ಅಬ್ಬರ ಕಡಿಮೆಯಾದ ಬಳಿಕ ಮುಳುಗಡೆಯಾಗಿದ್ದ ಪ್ರದೇಶದ ನೆರೆ ಇಳಿದಿದೆ. ಆದರೆ ನೆರೆಗೆ ತತ್ತರಿಸಿದ ಜನರ ಬದುಕು ಬೀದಿಗೆ ಬಂದಿದ್ದು, ಸರ್ಕಾರ ಇಂತವರನ್ನು ಗುರುತಿಸಿ ಸೂಕ್ತ ಸೂರು ಹಾಗು ಪರಿಹಾರವನ್ನು ತಕ್ಷಣ ನೀಡಿ ಬದುಕಿಗೆ ಆಸರೆಯಾಗಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.