ಕಾರವಾರ: ಮೀನುಗಾರರು ಪ್ರತಿನಿತ್ಯ ಸಮುದ್ರಕ್ಕೆ ತೆರಳಿ ಮೀನುಗಾರಿಕೆ ನಡೆಸಿ ಮೀನು ಮಾರಾಟ ಮಾಡುವ ಕಾಯಕದಲ್ಲೇ ಬ್ಯುಸಿಯಾಗಿರುತ್ತಾರೆ. ಬಹುತೇಕರಿಗೆ ಮೀನುಗಾರಿಕೆ ಹೊರತುಪಡಿಸಿ ಯಾವುದೇ ಮನರಂಜನೆಯಲ್ಲಿ ತೊಡಗಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಅಂಕೋಲಾದ ಗ್ರಾಮವೊಂದರಲ್ಲಿ ಮೀನುಗಾರ ಸಮುದಾಯದವರಿಗಾಗಿಯೇ ವಿನೂತನ ಪಂದ್ಯಾವಳಿಯೊಂದನ್ನು ಆಯೋಜನೆ ಮಾಡಲಾಗಿತ್ತು. ಹೊನಲು ಬೆಳಕಿನ ಈ ಪಂದ್ಯಾಟದಲ್ಲಿ ಮಹಿಳೆಯರು, ಮಕ್ಕಳೂ ಸಹ ಬೆರೆತು ಎಂಜಾಯ್ ಮಾಡಿದ್ದಾರೆ.
ಒಂದೆಡೆ ಹಗ್ಗವನ್ನು ಜಗ್ಗಿ ಹಿಡಿದು ಎದುರಾಳಿಗಳ ಎದುರು ಬಲಪ್ರದರ್ಶಿಸುತ್ತಿರುವ ಯುವಕರು, ಇನ್ನೊಂದೆಡೆ ಯಾರಿಗಿಂತ ನಾವೇನೂ ಕಮ್ಮಿಯಿಲ್ಲ ಅಂತಾ ಹಗ್ಗ ಜಗ್ಗುತ್ತಾ ಶಕ್ತಿ ಪ್ರದರ್ಶಿಸುತ್ತಿರುವ ಮಹಿಳೆಯರು. ಮತ್ತೊಂದೆಡೆ ಪಂದ್ಯಾವಳಿಯನ್ನು ವೀಕ್ಷಿಸಲು ನೂರಾರು ಸಂಖ್ಯೆಯಲ್ಲಿ ಜಮಾಯಿಸಿರುವ ಗ್ರಾಮಸ್ಥರು. ಈ ಎಲ್ಲ ದೃಶ್ಯಗಳು ಕಂಡುಬಂದಿದ್ದು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಹಾರವಾಡ ಗ್ರಾಮದಲ್ಲಿ.
22 ತಂಡಗಳು ಭಾಗಿ: ಹಾರವಾಡ ಗ್ರಾಮದಲ್ಲಿ ಮೀನುಗಾರ ಸಮುದಾಯದವರಿಗಾಗಿ ಹೊನಲು ಬೆಳಕಿನ ಜಿಲ್ಲಾ ಮಟ್ಟದ ಹಗ್ಗ- ಜಗ್ಗಾಟ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು. ಗ್ರಾಮದ ವಿಘ್ನೇಶ್ವರ ಬಾಯ್ಸ್ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಈ ಪಂದ್ಯಾವಳಿಯಲ್ಲಿ ಮಹಿಳೆಯರು, ಪುರುಷರು ಹಾಗೂ ಯುವಕರ ಸುಮಾರು 22 ತಂಡಗಳು ಭಾಗವಹಿಸಿದ್ದು, ಹಗ್ಗ ಜಗ್ಗಾಟದಲ್ಲಿ ಎದುರಾಳಿಗಳಿಗೆ ಟಕ್ಕರ್ ನೀಡುವ ಮೂಲಕ ತಮ್ಮ ತಂಡದ ಶಕ್ತಿ ಪ್ರದರ್ಶಿಸಿದರು. ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ತಂಡಗಳು ಉತ್ತಮ ಪ್ರದರ್ಶನ ನೀಡಿದ್ದು ನೋಡುಗರನ್ನು ರಂಜಿಸಿತು.
ಇನ್ನು ಇದೇ ಮೊದಲ ಬಾರಿ ಮೀನುಗಾರರಿಗಾಗಿ ಜಿಲ್ಲಾ ಮಟ್ಟದ ಹಗ್ಗ- ಜಗ್ಗಾಟ ಪಂದ್ಯಾವಳಿಯನ್ನು ಆಯೋಜಿಸಿದ್ದು, ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ ಹಾಗೂ ಭಟ್ಕಳ ಸೇರಿದಂತೆ ವಿವಿಧೆಡೆಗಳಿಂದ ನೂರಾರು ಮಂದಿ ಆಟಗಾರರು ಆಗಮಿಸಿದ್ದರು. ಅಲ್ಲದೇ ಮಹಿಳೆಯರಿಗಾಗಿಯೇ ಪ್ರತ್ಯೇಕವಾಗಿ ತಂಡಗಳನ್ನು ಮಾಡಿ ಪಂದ್ಯಾವಳಿ ನಡೆಸಿದ್ದು, ಮಹಿಳೆಯರು ಪುರುಷರಿಗಿಂತ ತಾವೇನೂ ಕಡಿಮೆಯಿಲ್ಲ ಎನ್ನುವಂತೆ ಭರ್ಜರಿ ಶಕ್ತಿ ಪ್ರದರ್ಶನ ನೀಡಿದ್ರು.
ಪಂದ್ಯಾವಳಿ ಆಯೋಜನೆ ಬಗ್ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ: ಅಲ್ಲದೇ ಪಂದ್ಯಾವಳಿಯನ್ನು ವೀಕ್ಷಿಸಲು ಸುತ್ತಲಿನ ಹತ್ತಾರು ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದು ತಂಡಗಳ ಸೆಣಸಾಟಕ್ಕೆ ಚಪ್ಪಾಳೆ, ಶಿಳ್ಳೆ ಹಾಕುವ ಮೂಲಕ ಪ್ರೋತ್ಸಾಹ ನೀಡಿದ್ರು. ಯಾವಾಗಲೂ ತಾವಾಯಿತು, ತಮ್ಮ ಕೆಲಸವಾಯಿತು ಎನ್ನುತ್ತಾ ಮಗ್ನವಾಗಿರುತ್ತಿದ್ದ ಮೀನುಗಾರರಿಗೆ ಈ ಹಗ್ಗ ಜಗ್ಗಾಟ ಪಂದ್ಯಾವಳಿ ಮನರಂಜನೆ ನೀಡಿದ್ದು, ಎಲ್ಲರೂ ಸಹ ಉತ್ಸಾಹದಿಂದ ಪಾಲ್ಗೊಂಡಿದ್ದರು. ಅದರಲ್ಲೂ ಹೊನಲು ಬೆಳಕಿನ ಪಂದ್ಯಾವಳಿ ಆಯೋಜಿಸಿದ್ದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರತಿವರ್ಷ ಇದೇ ರೀತಿ ಪಂದ್ಯಾವಳಿ ಆಯೋಜನೆಯಾಗಲಿ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ನಶಿಸಿ ಹೋಗುತ್ತಿರುವ ಗ್ರಾಮೀಣ ಸೊಗಡಿನ ಕ್ರೀಡೆಯನ್ನು ಯುವಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಪಂದ್ಯಾವಳಿ ಸಹಕಾರಿಯಾಗಿದ್ದು ಒಂದೆಡೆಯಾದ್ರೆ, ಸದಾ ಕೆಲಸದಲ್ಲೇ ಕಾಲ ಕಳೆಯುತ್ತಿದ್ದ ಮೀನುಗಾರರಿಗೆ ಕೊಂಚ ಮನರಂಜನೆ ನೀಡಿದ್ದಂತೂ ಸತ್ಯ.
ಇದನ್ನೂ ಓದಿ: ಮಲೆನಾಡ ಜನರ ಕೆರೆ ಬೇಟೆ ಸಂಭ್ರಮ ನೋಡಿ- ವಿಡಿಯೋ