ಕಾರವಾರ: ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿ ವಿರೋಧಿಸಿ ಕರೆ ಕೊಟ್ಟಿರುವ ಕಾರವಾರ ಬಂದ್ಗೆ ನಗರದಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ನಗರದಲ್ಲಿ ಮೀನುಗಾರರು ಸೇರಿದಂತೆ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರ ಸಹಕಾರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಆರಂಭಿಸಿದ್ದು 3 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದಾರೆ.
ಸಾಗರಮಾಲಾ ಯೋಜನೆಯಡಿ ವಾಣಿಜ್ಯ ಬಂದರಿನ ಎರಡನೇ ಹಂತದ ವಿಸ್ತರಣೆ ಕಾಮಗಾರಿ ವಿರೋಧಿಸಿ ಮೀನುಗಾರರು ಸೇರಿದಂತೆ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ಮೀನುಗಾರರು ಕರೆಕೊಟ್ಟಿರುವ ಬಂದ್ ಗೆ ಮೂರು ಸಾವಿರಕ್ಕೂ ಹೆಚ್ಚು ಜನರು ಜಾತಿ ಬೇಧ ಮರೆತು ಬೆಂಬಲ ನೀಡಿದ್ದಾರೆ.
ಇನ್ನು ಪ್ರತಿಭಟನಾ ಮೆರವಣೆಗೂ ಪೂರ್ವದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಪ್ರತಿಭಟನಾಕಾರರಲ್ಲಿ ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿಯಿಂದ ಕಾರವಾರದ ಏಕೈಕ ರವೀಂದ್ರನಾಥ ಟ್ಯಾಗೋರ ಬೀಚ್ ಮಾಯವಾಗುವ ಆತಂಕ ಇದ್ದು, ಈ ಹಿನ್ನೆಲೆಯಲ್ಲಿ ಕೂಡಲೇ ಯೋಜನೆಯನ್ನು ಕೈಬಿಡಬೇಕು. ಜತೆಗೆ ಕಡಲತೀರದಲ್ಲಿ ಬದುಕು ಕಟ್ಟಿಕೊಂಡಿರುವ ಮೀನುಗಾರರಿಗೆ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.