ಕಾರವಾರ: ಆಗಸ್ಟ್ 1 ರಿಂದ ಆಳ ಸಮುದ್ರದ ಮೀನುಗಾರಿಕೆ ಪುನಃ ಪ್ರಾರಂಭವಾಗಲಿದೆ. ಕೊರೊನಾ, ಪ್ರವಾಹ, ಹವಾಮಾನ ವೈಪರೀತ್ಯ ಹೀಗೆ ನಾನಾ ಕಾರಣದಿಂದ ಕಳೆದ ಕೆಲ ವರ್ಷದಿಂದ ಉತ್ತರಕನ್ನಡದಲ್ಲಿ ಕುಂಠಿತಗೊಂಡಿದ್ದ ಮೀನುಗಾರಿಕೆ ಈ ಬಾರಿ ಏರಿಕೆಯಾಗಿದೆ. ಕಳೆದ ವರ್ಷಕ್ಕಿಂತ 14,466 ಮೆಟ್ರಿಕ್ ಟನ್ ಮೀನು ಉತ್ಪಾದನೆ ಹೆಚ್ಚಳವಾಗಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಪರ್ಸಿಯನ್, ಟ್ರಾಲರ್, ಆಳ ಸಮುದ್ರದ ಟ್ರಾಲರ್ ದೋಣಿಗಳೂ ಸೇರಿದಂತೆ ಒಟ್ಟು 3 ಸಾವಿರಕ್ಕೂ ಹೆಚ್ಚು ಯಾಂತ್ರೀಕೃತ ಬೋಟ್‌ಗಳಿವೆ. ಈ ಬಾರಿಯ ಹಂಗಾಮಿನಲ್ಲಿ ಆರಂಭದಿಂದಲೂ ಬಹುತೇಕ ಉತ್ತಮ ಮೀನುಗಾರಿಕೆ ನಡೆದಿದ್ದು, ಒಟ್ಟು 1,17,266 ಮೆಟ್ರಿಕ್ ಟನ್ ಮೀನು ಉತ್ಪಾದಿಸಲಾಗಿದೆ. 2020-21 ರಲ್ಲಿ 1,02,800 ಮೆಟ್ರಿಕ್ ಟನ್ ಮೀನು ಉತ್ಪಾದನೆ ಮಾಡಲಾಗಿತ್ತು. ಈ ಬಾರಿ 14,446 ಮೆಟ್ರಿಕ್ ಟನ್ ಹೆಚ್ಚು ಉತ್ಪಾದನೆಯಾಗಿದೆ. 2018-19ರಲ್ಲಿ 10.85 ಮೆಟ್ರಿಕ್ ಟನ್, 2019-20ರಲ್ಲಿ 10.19 ಮೆಟ್ರಿಕ್ ಟನ್ ಉತ್ಪಾದನೆಯಾಗಿತ್ತು.
ಹಿಡುವಳಿ ಹೆಚ್ಚಳವಾದರೂ ಸಿಗದ ಲಾಭ: ಕಳೆದ ಬಾರಿಗಿಂತ ಈ ಸಲ ಮೀನುಗಾರಿಕೆ ಉತ್ತಮವಾಗಿದೆ. ಆದರೂ ಇದರಿಂದ ಮೀನುಗಾರರಿಗೆ ಲಾಭವಾಗಿಲ್ಲ. ಈ ಹಿಂದೆ ಲೀ.ಗೆ 60-70 ರೂಪಾಯಿಗೆ ಸಿಗುತ್ತಿದ್ದ ಡೀಸೆಲ್ ಇದೀಗ ನೂರರ ಗಡಿ ದಾಟಿದೆ. ಎಷ್ಟೇ ಮೀನುಗಾರಿಕೆ ಹೆಚ್ಚಾದರೂ ಡೀಸೆಲ್ ದರ ಏರಿಕೆಯಿಂದಾಗಿ ಹೆಚ್ಚಿನ ಹಣ ಮೀನುಗಾರರ ಕೈ ಸೇರುತ್ತಿಲ್ಲ.
ಮೀನುಗಾರಿಕೆ ಇಲಾಖೆಯ ಪ್ರಕಾರ, 2021-22ನೇ ಸಾಲಿನ ಮಾರ್ಚ್‌ವರೆಗೆ ರಾಜ್ಯದ ಕರಾವಳಿಯಲ್ಲಿ 5.74 ಲಕ್ಷ ಟನ್ ಆಳ ಸಮುದ್ರ ಮೀನು ಉತ್ಪಾದನೆಯಾಗಿದೆ. ಅದರಲ್ಲಿ ಪರ್ಸಿಯನ್ ಬೋಟ್‌ಗಳು ಉತ್ತಮ ಮೀನು ಹಿಡಿದಿವೆ. ಆದರೆ, ಟ್ರಾಲರ್ ಬೋಟ್‌ಗಳಿಗೆ ತಕ್ಕ ಮಟ್ಟಿಗೆ ಮೀನು ದೊರೆತರೂ ಡೀಸೆಲ್ ದರ ಹೊಡೆತ ಕೊಟ್ಟಿದೆ. ಸಾಮಾನ್ಯವಾಗಿ ಟ್ರಾಲರ್ ಬೋಟ್‌ಗಳು 3-4 ದಿನ ಮೀನುಗಾರಿಕೆಗೆ ತೆರಳುತ್ತವೆ. ಒಂದು ಟ್ರಾಲರ್ ಬೋಟ್ ಒಮ್ಮೆ ಮೀನುಗಾರಿಕೆಗೆ ತೆರಳಲು 500-700 ಲೀಟರ್ ಡೀಸೆಲ್ ಬೇಕಾಗುತ್ತದೆ. ಆದರೆ, ಈ ಬಾರಿ 100 ರೂ.ಗೆ ಡೀಸೆಲ್ ಮಾರಾಟವಾಗುತ್ತಿದ್ದು ಬೋಟ್ ಮಾಲಿಕರಿಗೆ ಮೀನುಗಾರಿಕೆ ನಡೆಸುವುದೇ ಕಷ್ಟಸಾಧ್ಯ ಎನ್ನುತ್ತಾರೆ ಉತ್ತರಕನ್ನಡ ಜಿಲ್ಲಾ ಮೀನು ಮಾರಾಟಗಾರರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್.
ಸಿಗಡಿ ಉತ್ಪಾದನೆ ಕುಂಠಿತ: ಈ ವರ್ಷದ ಮೀನುಗಾರಿಕೆ ಹಂಗಾಮಿನಲ್ಲಿ ಬಂಗುಡೆ ಮೀನುಗಳೇ ಹೆಚ್ಚಾಗಿ ಲಭಿಸಿವೆ. ಪಾಪ್ಲೇಟ್, ಸಿಗಡಿ, ಇಶ್ವಣಗಳಂಥ ದುಬಾರಿ ಮೀನುಗಳ ಉತ್ಪಾದನೆ ಕಡಿಮೆಯಾಗಿದೆ. ಸಿಗಡಿ ಉತ್ಪಾದನೆ ಶೇ.80ರಷ್ಟು ಕಡಿಮೆಯಾಗಿದೆ. ದಿನಕ್ಕೆ 100-150 ಕೆ.ಜಿ. ಸಿಗಡಿ ಹಿಡಿಯುತ್ತಿದ್ದ ಬೋಟ್‌ಗಳಿಗೆ ಈ ವರ್ಷ 20-30 ಕೆಜಿ ಸಿಗಡಿ ಕೂಡ ಸಿಕ್ಕಿಲ್ಲ. ಇದರಷ್ಟೇ ಬೆಲೆ ಇರುವ ಪಾಪ್ಲೇಟ್ ಮೀನು ಕೂಡ ಕಡಿಮೆಯಾಗಿದೆ. ಈ ಕಾರಣಕ್ಕೆ ಬೋಟುಗಳ ವಾರ್ಷಿಕ ದುಡಿಮೆ ಮೌಲ್ಯ ಹೆಚ್ಚಾಗಿಲ್ಲ. ಟ್ರಾಲರ್ ಬೋಟ್‌ಗಳು ವರ್ಷಕ್ಕೆ 25-30 ಲಕ್ಷ ರೂ. ಮೀನು ಉತ್ಪನ್ನ ಮಾಡಿದರೆ, ಅದರಲ್ಲಿ ಡೀಸೆಲ್ ವೆಚ್ಚವೇ 20-22 ಲಕ್ಷ ರೂ. ಆಗಿದೆ ಎನ್ನುತ್ತಾರೆ ಮೀನುಗಾರರು.