ಕಾರವಾರ (ಉತ್ತರ ಕನ್ನಡ): ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳು ಫುಲ್ ಆ್ಯಕ್ಟಿವ್ ಆಗಿವೆ. ಒಂದಿಷ್ಟು ಜಾಲತಾಣಗಳಲ್ಲಿ ಉತ್ತಮ ಸಂದೇಶಗಳು ರವಾನೆಯಾಗುತ್ತಿದ್ದರೂ ಇನ್ನೊಂದಿಷ್ಟು ಕಡೆ ವೈಯಕ್ತಿಕ ಹಾಗೂ ತೇಜೋವಧೆಯಂತಹ ಮಾಹಿತಿಗಳನ್ನು ಹರಿಬಿಟ್ಟು ವಿಕೃತಿ ಮೆರೆಯಲಾಗುತ್ತಿದೆ. ಹೀಗೆ ಭಟ್ಕಳದಲ್ಲಿಯೂ ನಕಲಿ ಖಾತೆಗಳನ್ನು ತೆರೆದು ಆ ಮೂಲಕ ಮಾಜಿ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ ಇಬ್ಬರು ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೌದು ಸಾಮಾಜಿಕ ಜಾಲತಾಣಗಳು, ಇತ್ತೀಚಿನ ದಿನದಲ್ಲಿ ಅತಿ ವೇಗದ ಸಂಪರ್ಕ ಮಾಧ್ಯಮವಾಗಿದೆ. ಬಹುತೇಕ ಜನರು ಸಾಮಾಜಿಕ ಜಾಲತಾಣಗಳ ಮೊರೆ ಹೋಗುತ್ತಿದ್ದು, ಅದರಲ್ಲೂ ರಾಜಕೀಯ ನಾಯಕರು ತಮ್ಮ ಪ್ರಚಾರ ಮಾಧ್ಯಮವನ್ನಾಗಿ ಸಾಮಾಜಿಕ ಜಾಲತಾಣಗಳನ್ನು ಮಾಡಿಕೊಂಡಿದ್ದಾರೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಇದೇ ಸಾಮಾಜಿಕ ಜಾಲತಾಣಗಳು ಕೆಲ ರಾಜಕಾರಣಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ. ನಕಲಿ ಸಾಮಾಜಿಕ ಜಾಲತಾಣಗಳ ಖಾತೆಯ ಮೂಲಕ ರಾಜಕಾರಣಿಗಳ ವಿರುದ್ಧ ಇಲ್ಲಸಲ್ಲದ ಆಧಾರ ರಹಿತವಾಗಿ ಟೀಕೆ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ.
ಅದರಲ್ಲಿಯೂ ಭಟ್ಕಳ ಕ್ಷೇತ್ರದಲ್ಲಿ ಅತಿಹೆಚ್ಚು ನಕಲಿ ಖಾತೆಗಳು ಸೃಷ್ಟಿಯಾಗಿ ಹಾಲಿ ಹಾಗೂ ಮಾಜಿ ಶಾಸಕರ ವಿರುದ್ಧ ಆರೋಪ ಪ್ರತ್ಯಾರೋಪಗಳು ಹೆಚ್ಚಾಗಿವೆ. ಅದರಂತೆ ಕಳೆದ ಕೆಲ ದಿನಗಳ ಹಿಂದೆ ಮಾಜಿ ಶಾಸಕ ಮಂಕಾಳು ವೈದ್ಯ ವಿರುದ್ಧ ನಕಲಿ ಖಾತೆ ಮೂಲಕ ವೈಯಕ್ತಿಕ ತೇಜೋವಧೆ ವಿಡಿಯೋಗಳನ್ನು ಹರಿಬಿಟ್ಟಿದ್ದರು. ಅಲ್ಲದೆ ಹೆಣ್ಣುಮಕ್ಕಳ ಮಾನ ಹಾನಿಯಾಗುವಂತೆ ನಕಲಿ ಜಾಲತಾಣಗಳಲ್ಲಿ ಪೋಸ್ಟ್ ಗಳನ್ನು ಹರಿಬಿಡುತ್ತಿರುವುದರಿಂದ ಇಬ್ಬರ ವಿರುದ್ಧ ಭಟ್ಕಳ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಲಾಗಿದೆ. ಅಲ್ಲದೆ ಇದೇ ವ್ಯಕ್ತಿಗಳು ಪ್ರಕರಣ ದಾಖಲಿಸಿದ ಬಳಿಕವೂ ಮತ್ತೆ ಪೋಸ್ಟ್ ಹಾಕಿ ತಮ್ಮನ್ನು ಬಂಧಿಸುವಂತೆ ಪೊಲೀಸರಿಗೆ ಸವಾಲು ಹಾಕಿದ್ದು ಇಂತವರ ವಿರುದ್ಧ ಕೂಡಲೇ ಸೂಕ್ತ ಕ್ರಮಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇನ್ನು ನಕಲಿ ಹೆಸರುಗಳನ್ನು ಹಾಕಿ ಯಾರದ್ದೋ ಫೋಟೋಗಳನ್ನು ಹಾಕಿ ಫೇಸ್ ಬುಕ್ ಖಾತೆಯನ್ನು ತೆಗೆದು ಆ ಮೂಲಕ ತಮ್ಮ ವಿರುದ್ದ ಇರುವ ರಾಜಕಾರಣಿಗಳನ್ನು ಟೀಕೆ ಮಾಡಲು ಈ ಖಾತೆಗಳನ್ನು ಬಳಸುತ್ತಿದ್ದಾರೆ. ಈ ಬಗ್ಗೆ ಜಿಲ್ಲೆಯ ಹೊನ್ನಾವರ ಪೊಲೀಸ್ ಠಾಣೆಯಲ್ಲಿಯೂ ಈ ಹಿಂದೆ ದೂರು ಸಹ ದಾಖಲಾಗಿ ಓರ್ವ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಚುನಾವಣೆ ಹಿನ್ನೆಲೆಯಲ್ಲಿ ಮತ್ತಷ್ಟು ನಕಲಿ ಖಾತೆಗಳು ಆಕ್ಟೀವ್ ಆಗಿವೆ. ಇನ್ನು ಈ ಬಗ್ಗೆ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅವರ ಬಳಿ ಕೇಳಿದರೆ ಇಂತಹ ಕೃತ್ಯಗಳಿಗೆ ಯಾವುದೇ ಕಾರಣಕ್ಕೂ ಆಸ್ಪದ ಇಲ್ಲ. ಕೋಮುಸೌಹಾರ್ದತೆ ಕೆಡಿಸಲು ಮುಂದಾದರೆ ಪೊಲೀಸ್ ಇಲಾಖೆ ಸರಿಯಾದ ಕ್ರಮ ಕೈಗೊಳ್ಳಲಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಜವಾಬ್ದಾರಿ, ಯಾವ ಕಾರಣಕ್ಕೂ ಮುಲಾಜಿಲ್ಲದೇ ಕ್ರಮ ಜರುಗಿಸುವುದಾಗಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಎಚ್ಚರಿಸಿದ್ದಾರೆ.
ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನಕಲಿ ಸಾಮಾಜಿಕ ಜಾಲತಾಣ ಖಾತೆಗಳ ಹಾವಳಿ ಹೆಚ್ಚಾಗಿದ್ದು. ಇದೀಗ ಚುನಾವಣೆ ವೇಳೆ ಮತ್ತುಷ್ಟು ಹೆಚ್ಚಾಗಿ ವೈಯಕ್ತಿಕ ತೇಜೋವಧೆ, ನಿಂದನೆ ಮಾಡಲಾಗುತ್ತಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ಗಮನ ಹರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕಿದೆ.
ಇದನ್ನೂ ಓದಿ; ರಾಹುಲ್ಗೆ ಶಿಕ್ಷೆ ವಿಧಿಸಿದ ಸೂರತ್ ಜಡ್ಜ್ ನಾಲಿಗೆ ಕತ್ತರಿಸುವೆ ಎಂದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ವಿರುದ್ಧ ಕೇಸ್