ಕಾರವಾರ: ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯಕ್ ಅವರ ಕಾರು ಹೆದ್ದಾರಿ ಬದಲು ಕಡಿಮೆ ದೂರ ಇರುವ ಕಾರಣ ಒಳ ರಸ್ತೆಯಲ್ಲಿ ಆಗಮಿಸಿದ್ದು, ಅರೆಬರೆ ರಸ್ತೆ ಕಾಮಗಾರಿಯಿಂದಾಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅಂಕೋಲಾ ತಾಲೂಕಿನ ಹೊಸಕಂಬಿ ಗ್ರಾಮದ ಬಳಿ ನಡೆದ ಅಪಘಾತದಲ್ಲಿ ಸಚಿವರ ಪತ್ನಿ ವಿಜಯಾ ಹಾಗೂ ಆಪ್ತ ಕಾರ್ಯದರ್ಶಿ ದೀಪಕ್ ದುಬೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಯಲ್ಲಾಪುರದ ಚಂದಗುಳಿ ಗಂಟೆ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಗೋಕರ್ಣಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಪ್ರತ್ಯಕ್ಷದರ್ಶಿ ಹೇಳಿದ್ದೇನು?
ಯಲ್ಲಾಪುರ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಆಗಮಿಸಬೇಕಾಗಿದ್ದವರು ಕಡಿಮೆ ದೂರದ ಹಿನ್ನೆಲೆಯಲ್ಲಿ ಯಲ್ಲಾಪುರ ಹೊಸಕಂಬಿ ಗೋಕರ್ಣದ ಕಿರಿದಾದ ರಸ್ತೆಯಲ್ಲಿ ಆಗಮಿಸಿದ್ದರು. ಆ ವೇಳೆ ಬೆಂಗಾವಲು ವಾಹನ ಹಿಂದೆಯೇ ಇತ್ತು ಎನ್ನಲಾಗಿದೆ. ಆದರೆ ಮಾರ್ಗಮಧ್ಯೆ ಹೊಸಕಂಬಿ ಬಳಿ ರಸ್ತೆ ಕಾಮಗಾರಿ ಅರೆಬರೆಯಾಗಿತ್ತು. ವೇಗವಾಗಿ ಬಂದ ಕಾರಿನ ಗಾಲಿಗಳು ರಸ್ತೆ ಒಂದು ಬದಿ ಹೊಂಡಕ್ಕೆ ಬಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಂದಕಕ್ಕೆ ಬಿದ್ದು ಮರಕ್ಕೆ ಬಡಿದಿದೆ. ತಕ್ಷಣ ಸಚಿವರನ್ನು ಹಾಗು ಅವರ ಪತ್ನಿಯನ್ನು ಬೆಂಗಾವಲು ವಾಹನ ಹಾಗೂ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಯುವಕರು ಮಾಹಿತಿ ನೀಡಿದ್ದಾರೆ.
ಗಂಭೀರ ಗಾಯಗೊಂಡಿದ್ದ ಸಚಿವರ ಪತ್ನಿ ವಿಜಯಾ ಆಸ್ಪತ್ರೆಗೆ ಸಾಗಿಸುವಾಗ ಸಾವಿಗೀಡಾಗಿದ್ದಾರೆ. ಬಳಿಕ ಆಪ್ತ ಕಾರ್ಯದರ್ಶಿ ದೀಪಕ್ ದುಬೆ ಕೂಡ ಚಿಕಿತ್ಸೆ ಫಲಕಾರಿಯಾಗಿದೆ ಅಸು ನೀಗಿದ್ದಾರೆ. ಸಚಿವ ಶ್ರೀಪಾದ್ ಎಡಗೈಗೆ ಪೆಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಗೋವಾದ ಬಾಂಬೋಲಿಗೆ ಸಾಗಿಸಲಾಗಿದೆ.
ಗಂಭೀರ ಗಾಯಗೊಂಡಿದ್ದ ಗನ್‌ಮ್ಯಾನ್ ತುಕಾರಾಮ ಪಾಟೀಲ್, ಚಾಲಕ ಚಂದನ್ ಹಾಗೂ ಸಾಯಿಕಿರಣ ಸೇಟಿಯಾ ಎಂಬುವವರಿಗೆ ಅಂಕೋಲಾ ಖಾಸಗಿ ಆಸ್ಪತ್ರೆಯಿಂದ ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಪಯಾದಿಂದ ಪಾರಾಗಿದ್ದಾರೆ ಎಂದು ಬಿಜೆಪಿ ಪ್ರಮುಖರಾದ ನಾಗರಾಜ್ ನಾಯ್ಕ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿರುವ ಮೆಡಿಕಲ್ ಕಾಲೇಜಿನ ನಿರ್ದೇಶಕ ಗಜಾನನ ನಾಯಕ, ಮೂವರಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನು ಕೂಡ ಸ್ಕ್ಯಾನಿಂಗ್ ಮಾಡಬೇಕಿದೆ. ಆದರೆ, ಸದ್ಯ ಯಾವುದೇ ತೊಂದರೆ ಇಲ್ಲದಂತೆ ಕಂಡುಬಂದಿದ್ದು ಆಸ್ಪತ್ರೆ ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇನ್ನು ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ಡಾ.ಕೆ. ಹರೀಶಕುಮಾರ್, ಎಸ್ಪಿ ಶಿವಪ್ರಕಾಶ್ ದೇವರಾಜು, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಸೇರಿದಂತೆ ಬಿಜೆಪಿ ಪ್ರಮುಖರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.