ಭಟ್ಕಳ: ಇವಿಎಂ, ಸಿಎಎ, ಎನ್.ಆರ್.ಸಿ ಭಾಂಡ ಫೋಡ್ ಪರಿವರ್ತನಾ ಯಾತ್ರೆ ಫೆಬ್ರವರಿ 2ರಂದು ಭಟ್ಕಳಕ್ಕೆ ಬರುತ್ತಿದ್ದು ಅಂದು ಸಂಜೆ 4 ಗಂಟೆಗೆ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಬೃಹತ್ ಜನಾಂದೋಲನ ಸಮಾವೇಶ ನಡೆಸಲಾಗುವುದು ಎಂದು ಭಾರತ ಮುಕ್ತಿ ಮೋರ್ಚಾ ಹಾಗೂ ರಾಷ್ಟ್ರೀಯ ಮೈನಾರಿಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪ್ರೋ.ವಿಲಾಸ್ ಕರಾತ್ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರೋ.ವಿಲಾಸ್ ಕರಾತ್, ಇವಿಎಂ ಯಂತ್ರ ತಿರುಚುವುದರ ಮೂಲಕ ದೇಶದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಈಗ ದೇಶದಲ್ಲಿ ಜನವಿರೋಧಿ ಕಾನೂನು ಜಾರಿಗೊಳಿಸಿ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸುತ್ತಿದ್ದು, ಇ.ವಿ.ಎಂ, ಎನ್.ಆರ್.ಸಿ, ಸಿಎಎ ವಾಸ್ತವಿಕತೆಯನ್ನು ಜನಾಂದೋಲನದ ಮೂಲಕ ಜನರೆದುರು ತೆರೆದಿಡುವಂತಹ ಪ್ರಯತ್ನ ಈ ಯಾತ್ರೆ ಮೂಲಕ ಮಾಡಲಾಗುತ್ತಿದೆ ಎಂದರು.
ರಾಷ್ಟ್ರೀಯ ಮಟ್ಟದಲ್ಲಿ ಎಸ್ಸಿ, ಎಸ್ಟಿ, ಓಬಿಸಿ ಹಾಗೂ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರವು ಕರಾಳ ಕಾನೂನು ಹೇರುತ್ತಿದೆ. ಇದರಿಂದಾಗಿ ದೇಶದ ಶೇ.85% ರಷ್ಟು ಜನರು ತಮ್ಮ ನಾಗರಿಕತೆಯನ್ನು ಸಾಬೀತುಪಡಿಸಲು ವಿಫಲರಾಗುತ್ತಾರೆ. ಅವರೆಲ್ಲರನ್ನೂ ಕೂಡ ದೇಶದಿಂದ ಹೊರಹಾಕುವ ಹುನ್ನಾರ ಕೇಂದ್ರ ಸರ್ಕಾರಕ್ಕಿದೆ ಎಂದರು. ಇದರ ವಿರುದ್ಧ ರಾಷ್ಟ್ರವ್ಯಾಪಿ ಜನಾಂದೋಲನ ಹಮ್ಮಿಕೊಳ್ಳುವುದರ ಮೂಲಕ ಬಹುಜನ ಕ್ರಾಂತಿ ಮೋರ್ಚಾ ಮತ್ತಿತರ ಸೋದರ ಸಂಘಟನೆಗಳು ಜೂನ್ 26- 2019 ರಂದು ಕಾಶ್ಮೀರದಿಂದ ಇವಿಎಂ ಭಾಂಡ ಫೋಡ್ ಪರಿವರ್ತನಾ ಯಾತ್ರೆಯನ್ನು ಆರಂಭಿಸಿದ್ದು, ಫೆಬ್ರವರಿ 2ರಂದು ಭಟ್ಕಳಕ್ಕೆ ತಲುಪಲಿದೆಯೆಂದರು.
2020ರ ಮೇ ತಿಂಗಳಲ್ಲಿ ಯಾತ್ರೆ ಕನ್ಯಾಕುಮಾರಿಯಲ್ಲಿ ಸಮಾಪ್ತಿಗೊಳ್ಳಲಿದೆ ಎಂದು ವಿವರಿಸಿದ ಅವರು ಫೆಬ್ರವರಿ 16 ರಂದು ಬೆಂಗಳೂರಿನಲ್ಲಿ ರಾಜ್ಯದ ಯಾತ್ರೆಯ ಸಮಾರೋಪವಿದೆ. ಅಂದು ಲಕ್ಷಾಂತರ ಜನರು ಈ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.