ಶಿರಸಿ(ಉತ್ತರ ಕನ್ನಡ) : ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಲವು ಪ್ರದೇಶಗಳಲ್ಲಿ ಆನೆಗಳು ಹಿಂಡು-ಹಿಂಡಾಗಿ ದಾಳಿ ನಡೆಸಿ, ಸುಮಾರು ಇಪ್ಪತ್ತಕ್ಕೂ ಹೆಚ್ಚು ರೈತರ ಜಮೀನಿನಲ್ಲಿ ಬೆಳೆ ಹಾನಿ ಉಂಟಾಗಿದೆ.
ತಾಲೂಕಿನ ಕಾನಸೂರು, ಗವಿನಗುಡ್ಡ, ಹಸರಗೋಡ ಹಾಗೂ ಅಮ್ಮಚ್ಚಿ ವ್ಯಾಪ್ತಿಯಲ್ಲಿ ಆನೆಗಳು ದಾಳಿ ನಡೆಸಿವೆ. ಕಳೆದ ಎರಡು ತಿಂಗಳಿನಿಂದ ಆನೆಗಳ ದಾಳಿ ನಡೆಯುತ್ತಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಮೊದಲು ನಾಲ್ಕು ಆನೆಗಳಿದ್ದ ಹಿಂಡಿಗೆ ಮತ್ತೆ ಮೂರು ಆನೆಗಳು ಸೇರಿಕೊಂಡಿವೆ. ಕಾನಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆನೆಗಳು ಸಂಚರಿಸುತಿದ್ದು, ಅರಣ್ಯಾಧಿಕಾರಿಗಳು ಹಾಗೂ ಸಾರ್ವಜನಿಕರು ಆನೆಗಳ ಹಿಂಡನ್ನು ಬನವಾಸಿ ಸರಹದ್ದಿನ ವ್ಯಾಪ್ತಿಗೆ ಅಟ್ಟಲು ಪ್ರಯತ್ನಿಸಿದ್ದಾರೆ. ಆದರೆ, ಫಲಕಾರಿಯಾಗಿಲ್ಲ.
ಕಳೆದ ನಾಲ್ಕೈದು ದಿನಗಳಿಂದ ಕಾನಸೂರು, ಹಸರಗೋಡ ವ್ಯಾಪ್ತಿಯ ಗವಿನಗುಡ್ಡ, ಮಲುಬಾಳಗಾರ, ಕೀಲಾರ, ಹಾಲ್ಕಣಿ, ಆನೆಗುಂಡಿ, ಬಿಳೆಗೋಡ, ಕರಮನೆ ಸುತ್ತಲಿನ ಅಡಕೆ, ತೆಂಗು ಹಾಗೂ ಬಾಳೆ ತೋಟ, ಕಬ್ಬು ಹಾಗೂ ಭತ್ತದ ಗದ್ದೆಗಳಲ್ಲಿ ದಾಳಿ ನಡೆಸಿ ಬೆಳೆ ನಾಶವಾಗಿರುವುದರಿಂದ ರೈತರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಆನೆ ಹಿಂಡು ಕಾಣಿಸಿಕೊಂಡಿರುವುದರಿಂದ ನಿತ್ಯ ವಿದ್ಯಾರ್ಥಿಗಳು ಕೂಡಾ ಆತಂಕದಲ್ಲಿ ಓಡಾಡುವಂತಾಗಿದೆ.
ಕಳೆದ ಎರಡು ತಿಂಗಳ ಹಿಂದೆ ಆನೆಗಳು ಸೊರಬಾ ತಾಲೂಕಿನಲ್ಲಿ ದಾಳಿ ಇಟ್ಟಿದ್ದವು .ಈ ಭಾಗದಿಂದ ಆನೆಗಳನ್ನು ಓಡಿಸಲಾಗಿತ್ತು. ನಂತರ ಬನವಾಸಿ ಭಾಗದಿಂದ ಸಿದ್ದಾಪುರ ಭಾಗಕ್ಕೆ ದಾಳಿ ಇಟ್ಟಿವೆ. ಒಟ್ಟು 6ಕ್ಕೂ ಅಧಿಕ ಆನೆಗಳು ಸಿದ್ದಾಪುರ, ಯಲ್ಲಾಪುರ, ಬನವಾಸಿ ಭಾಗದಲ್ಲಿ ಸಂಚಾರ ಮಾಡುತ್ತಿದೆ ಎನ್ನಲಾಗುತಿದ್ದು, ಆಹಾರ ಅರಸಿ ಕೃಷಿ ಭೂಮಿಗೆ ಲಗ್ಗೆ ಇಡುತ್ತಿದ್ದು ರೈತರನ್ನು ಭಯಭೀತರನ್ನಾಗಿಸಿದೆ.