ಕಾರವಾರ: ರಾಜ್ಯ ಬಜೆಟ್‌ನಲ್ಲಿ ಜಿಲ್ಲೆ ಪಾಲಿನ ಬಹುನಿರೀಕ್ಷಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ಈ ಹಿಂದೆ ಘೋಷಣೆ ಮಾಡಿದ ಯೋಜನೆಗಳು ಪ್ರಸ್ತಾಪವಾಗದಿರುವುದು ನಿರಾಸೆ ಮೂಡಿಸಿದೆ. ಆದರೆ ಮೀನುಗಾರರಿಗೆ ಸಾಲ ಸೌಲಭ್ಯ, ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಒತ್ತು, ಮೆಡಿಕಲ್ ಕಾಲೇಜುಗಳಿಗೆ ಎಂಆರ್‌ಐ ಸ್ಕ್ಯಾನಿಂಗ್ ನೀಡಲು ಪ್ರಸ್ತಾಪ ಮಾಡಿರುವುದು ಅನುಕೂಲವಾಗುವ ನಿರೀಕ್ಷೆ ಮೂಡಿದೆ.
ರಾಜ್ಯ ಬಜೆಟ್‌ನಲ್ಲಿ ಈ ಹಿಂದೆ ಚುನಾವಣೆ ಪೂರ್ವ ಬಿಜೆಪಿ ಸರ್ಕಾರ ಘೋಷಣೆ ಮಾಡಿದ್ದ ಬಹುನಿರೀಕ್ಷಿತ ಸೂಪರ್‌ಸ್ಪೆಶಾಲಿಟಿ ಆಸ್ಪತ್ರೆ, ಜೀವಪರಿಸರ ವಿಶ್ವವಿದ್ಯಾಲಯದ ಪ್ರಸ್ತಾಪ ಮಾಡಿಲ್ಲ. ಆದರೆ, ಈ ಹಿಂದೆ ಘೋಷಣೆ ಮಾಡಿದ್ದ ಹೊನ್ನಾವರ, ಭಟ್ಕಳ ಮತ್ತು ಬೇಲೆಕೇರಿ ಬಂದರುಗಳಲ್ಲಿ ಹೂಳೆತ್ತುವುದನ್ನು ಪ್ರತಿ ಎರಡು ವರ್ಷಕ್ಕೊಮ್ಮೆ ಎತ್ತಲು ಪರಿಷ್ಕರಿಸಿರುವುದು ಅನುಕೂಲವಾಗಿದೆ.
ಬಂದರು ಅವಲಂಬಿತ ಕೈಗಾರಿಕೆಗಳ ಉತ್ತೇಜನಕ್ಕೆ ಅಂಕೋಲಾದ ಕೇಣಿಯಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಸರ್ವಋತು ಡೀಪ್‌ವಾಟರ್ ಗ್ರೀನ್‌ಫೀಲ್ಡ್ ಬಂದರು ಅಭಿವೃದ್ಧಿ, ಹೊನ್ನಾವರದ ಮಂಕಿಯಲ್ಲಿ ಬಹುಪಯೋಗಿ ಬಂದರಿನ ಅಭಿವೃದ್ಧಿಗೆ ಕಾರ್ಯಸಾಧ್ಯತಾ ವರದಿ ಸಿದ್ಧತೆ, ಮೀನುಗಾರ ಮಹಿಳೆಯರಿಗೆ ಬ್ಯಾಂಕುಗಳಲ್ಲಿ ಬಡ್ಡಿರಹಿತ ಸಾಲದ ಮಿತಿ 50 ಸಾವಿರದಿಂದ 3 ಲಕ್ಷಕ್ಕೆ ಏರಿಕೆ ಮಾಡಲು ಪ್ರಸ್ತಾಪಿಸಲಾಗಿದೆ.
ಸಣ್ಣ ಕೈಗಾರಿಕೆಗಳ ಪ್ರೋತ್ಸಾಹಕ್ಕೆ ಕೆಎಸ್‌ಎಸ್‌ಐಡಿಸಿಯಿಂದ ಕುಮಟಾ ಕೋಡ್ಕಣಿಯಲ್ಲಿ ಕೈಗಾರಿಕಾ ವಸಾಹತು. ಮೀನುಗಾರರ ದೋಣಿಗಳಿಗೆ ರಿಯಾಯಿತಿ ದರದಲ್ಲಿ ನೀಡುವ ಡೀಸೆಲ್ ಮಿತಿ 1.5 ಲಕ್ಷ ಕಿಲೋ ಲೀಟರ್‌ನಿಂದ 2 ಲಕ್ಷ ಕಿಲೋ ಲೀಟರ್‌ಗೆ ಹೆಚ್ಚಳ. ಮೀನುಗಾರಿಕಾ ದೋಣಿಗಳ ಸೀಮೆಎಣ್ಣೆ ಎಂಜಿನ್‌ನ್ನು ಪೆಟ್ರೋಲ್, ಡೀಸೆಲ್ ಎಂಜಿನ್‌ಗೆ ಬದಲಾಯಿಸಲು ತಲಾ 50 ಸಾವಿರ ಸಹಾಯಧನ, ಪ್ರಸಕ್ತ ಸಾಲಿನಲ್ಲಿ 4 ಸಾವಿರ ಸೀಮೆಎಣ್ಣೆ ಎಂಜಿನ್ ಬದಲಾವಣೆಗೆ 20 ಕೋಟಿ ಸಹಾಯಧನ ಒದಗಿಸುವ ಪ್ರಸ್ತಾಪ ಮಾಡಲಾಗಿದೆ.
ಇನ್ನು ಗುಡ್ಡಗಾಡು ಪ್ರದೇಶಗಳ ರೈತರ ಕೃಷಿ ಉತ್ಪನ್ನ ಮತ್ತು ಪರಿಕರಗಳ ಸಾಗಾಣಿಕೆಗಾಗಿ ನಾಲ್ಕು ಚಕ್ರದ ಪಿಕ್‌ಅಪ್ ವ್ಯಾನ್ ಖರೀದಿಗೆ ಶೇ.4ರ ಬಡ್ಡಿದರದಲ್ಲಿ 7 ಲಕ್ಷದವರೆಗೆ ಸಾಲ. ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆ. ಕಡಲತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ ಕರಾವಳಿ ಬೀಚ್ ಪ್ರವಾಸೋದ್ಯಮ ಕಾರ್ಯಪಡೆಗೆ ಪ್ರಸ್ತಾಪಿಸಲಾಗಿದೆ.
ಎಲ್ಲ ಸರ್ಕಾರಿ ಸೇವೆಗಳನ್ನು ಒಂದೇ ಸೂರಿನಡಿ ತರುವ ಜಿಲ್ಲಾಡಳಿತ ಕಚೇರಿ ಸಂಕೀರ್ಣ ಪ್ರಗತಿಯಲ್ಲಿರುವ ಕಟ್ಟಡ ಕಾಮಗಾರಿ ಹಾಗೂ ಕಾರವಾರದ 450 ಬೆಡ್‌ಗಳ ಆಸ್ಪತ್ರೆ ನಿರ್ಮಾಣ ಆದ್ಯತೆ ಮೇರೆಗೆ ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಲು ಕ್ರಮವಹಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ.
'ಪಂಚಾಯತ್ ವ್ಯವಸ್ಥೆ ಬಲಪಡಿಸುವ ಯೋಜನೆ ಮುಂದುವರೆಸಿರುವುದು ಸ್ವಾಗತಾರ್ಹ. ಆದರೆ, ಗ್ಯಾರಂಟಿ ಯೋಜನೆ ಸರಿದೂಗಿಸಲು ಅಭಿವೃದ್ಧಿ ಯೋಜನೆಗಳು ಕುಂಠಿತವಾಗಲಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪರಿಗಣಿಸಿರುವುದು ಸಂತಸ ತಂದಿದೆ' ಎಂದು ಪಂಚಾಯತ್ ರಾಜ್ ವಿಕೇಂದ್ರಿಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಅವರು ತಿಳಿಸಿದ್ದಾರೆ.
ಸಾಮಾನ್ಯ ರಂಗಗಳಿಗೆ ಹೆಚ್ಚಿನ ಆದ್ಯತೆ: ಬಜೆಟ್ ಆರೋಗ್ಯ, ಕೃಷಿ, ನೀರಾವರಿ, ಇಂಧನ, ಶಿಕ್ಷಣ, ಸಾರಿಗೆ ಹೀಗೆ ಸಾಮಾನ್ಯ ರಂಗಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬಜೆಟ್ ಗಾತ್ರ ದೊಡ್ಡದಾಗಿರುವುದರಿಂದ ಅದನ್ನು ಹೇಗೆ ತುಂಬಿಕೊಳ್ಳುವರೋ ನೋಡಬೇಕಿದೆ ಎಂದು ಕಾರವಾರದ ಆರ್ಥಿಕ ತಜ್ಞ ಡಾ ಎಸ್ ಡಿ ನಾಯ್ಕ ಅವರು ತಿಳಿಸಿದ್ದಾರೆ.
ಇದು ನೀರಸ ಬಜೆಟ್. ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ತೆರೆಯಬೇಕೆಂಬ ಕನಸನ್ನು ಶಾಶ್ವತವಾಗಿ ಮುಚ್ಚಿ ಹಾಕಲಾಗಿದೆ. ರೈತರಿಗೂ ಬಜೆಟ್ ಅನಾನುಕೂಲವಾಗಿದೆ. ತೆರಿಗೆ ಹೆಚ್ಚಿಸಿ ಅಸಾಧಾರಣ ಬಜೆಟ್ ಮಂಡನೆಯಾಗಿದೆ ಎಂದು ಬಿಜೆಪಿ ಮುಖಂಡ ಶಿವಾನಂದ ಹೆಗಡೆ ಹೇಳಿದ್ದಾರೆ.
ಶ್ರೀಸಾಮಾನ್ಯನ ಮುಖದಲ್ಲಿ ಮಂದಹಾಸ ಮೂಡಿದೆ: ಏಳು ಕೋಟಿ ಜನರಿಗೆ ನೀಡಿದ ಐದು ಗ್ಯಾರಂಟಿಗಳಿಗೆ ಬಜೆಟ್‌ನಲ್ಲಿ ಅನುದಾನ ಒದಗಿಸಿ ಸಿಎಂ ನುಡಿದಂತೆ ನಡೆದಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ನಲುಗಿದ ಶ್ರೀಸಾಮಾನ್ಯನ ಮುಖದಲ್ಲಿ ಮಂದಹಾಸ ಮೂಡಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ಅವರು ತಿಳಿಸಿದ್ದಾರೆ.
'ಎಲ್ಲ ವರ್ಗಗಳನ್ನು ಗಣನೆಗೆ ತೆಗೆದುಕೊಂಡು ಅನುದಾನ ಹಂಚಿಕೆ ಮಾಡಿರುವುದರಿಂದ ಇದೊಂದು ಆರೋಗ್ಯಕರ ಹಾಗೂ ಆಶಾದಾಯಕ ಬಜೆಟ್' ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ನಡುವಿನಮನಿ ಹೇಳಿದ್ದಾರೆ.
ರಾಜ್ಯದ ಅಭಿವೃದ್ದಿ ಕುಂಠಿತಗೊಳ್ಳಲಿದೆ: ಗ್ಯಾರಂಟಿ ಯೋಜನೆ ಬಜೆಟ್‌ಗೆ ಹೊಂದಾಣಿಕೆ ಮಾಡಲು ಶೇ. 24 ರಷ್ಟು ಸಾಲ ಮಾಡಲು ನಿರ್ಧರಿಸಿದ್ದರಿಂದ ರಾಜ್ಯ ದಿವಾಳಿ ಅಂಚಿಗೆ ಹೋಗುವ ಸಾಧ್ಯತೆ ಇದೆ. ಸರ್ಕಾರದ ಬೇರೆ ಆದಾಯ ಮೂಲಗಳಿಂದ ಗ್ಯಾರಂಟಿ ಯೋಜನೆಗೆ ಹೊಂದಾಣಿಕೆ ಮಾಡಿಕೊಳ್ಳುವುದು ಸೂಕ್ತ. ಇಲ್ಲವಾದರೆ ಇದರಿಂದ ರಾಜ್ಯದ ಅಭಿವೃದ್ದಿ ಕುಂಠಿತಗೊಳ್ಳಲಿದೆ ಮಾಜಿ ಜಿ.ಪಂ ಸದಸ್ಯರಾದ ಎಲ್.ಟಿ ಪಾಟೀಲ ಅವರು ತಿಳಿಸಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಘೋಷಣೆ ಮಾಡಲಾಗಿದ್ದ ಜನಪರ ಹಾಗೂ ತುರ್ತು ಯೋಜನೆಗಳನ್ನು ಈ ಬಜೆಟ್‌ನಲ್ಲಿ ಕೈಬಿಡಲಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮಾಜಾಳಿಯಲ್ಲಿ ಮೀನುಗಾರಿಕಾ ಬಂದರು ಕೈಬಿಡಲಾಗಿದೆ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಬಜೆಟ್‌ನಲ್ಲಿ ಸಿದ್ದರಾಮಯ್ಯ ತವರು ಜಿಲ್ಲೆಗೆ ನೀಡಿದ ಕೊಡುಗೆಗಳೇನು?