ಭಟ್ಕಳ: ವರದಕ್ಷಿಣೆ ಹಣ ತರುವಂತೆ ಪೀಡಿಸಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಸಂತ್ರಸ್ತೆಯೋರ್ವರು ದೂರು ದಾಖಲಿಸಿದ್ದಾರೆ.
ತಾಲೂಕಿನ ಸರ್ಪನಕಟ್ಟೆಯ ಯಲ್ವಡಿಕವೂರ ನಿವಾಸಿಯ ಮಹಿಳೆಯೋರ್ವರು ದೂರು ನೀಡಿದ್ದಾರೆ. ಇವರು ಉಡುಪಿಯ ಕಾಪುವಿನ ನಿವಾಸಿ ಅಶ್ವೀನ ಅಮೀನ ಕಾಂತರಾಜು, ನಳಿನಾಕ್ಷಿ ಕಾಂತರಾಜು ಎಂಬುವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಉಡುಪಿಯ ಖಾಸಗಿ ಹಾಲ್‌ನಲ್ಲಿ ಅಕ್ಟೋಬರ್ 29ರಂದು ನನ್ನ ಮದುವೆ ನಡೆದಿತ್ತು. ಆ ಸಂದರ್ಭದಲ್ಲಿ ವರದಕ್ಷಿಣೆಯಾಗಿ 50 ಪವನ್ ಚಿನ್ನ ಕೇಳಿದ್ದರು. ನನ್ನ ಅಣ್ಣ 30 ಪವನ್ ಚಿನ್ನ ನೀಡಿ ಮದುವೆಯ 10 ಲಕ್ಷ ರೂ. ಖರ್ಚನ್ನು ಭರಿಸಿದ್ದರು. ಕೊಟ್ಟ ಮಾತಿನಂತೆ ಚಿನ್ನ ನೀಡಲಿಲ್ಲ ಎಂದು ಮದುವೆಯಾದ 2ನೇ ದಿನದಿಂದಲೇ ನನಗೆ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಇನ್ನು ನ. 25ರಂದು ಉಡುಪಿಯ ಕಾಪುವಿನ ಅಂಗಡಿಯೊಂದರ ಬಳಿ ನನ್ನ ತಲೆಗೆ ಬಲವಾಗಿ ಹೊಡೆದು ಹಲ್ಲೆ ನಡೆಸಿದ್ದರು. ಡಿ. 19ರಂದು ಹಣ ತರುವಂತೆ ಪೀಡಿಸಿ ಮನೆಯಿಂದ ಹೊರ ಹಾಕಿದ್ದರು. ನಂತರ ನಾನು 1.50 ಲಕ್ಷ ರೂ.ಗಳನ್ನು ಅವರ ಖಾತೆಗೆ ಜಮಾ ಮಾಡಿದ್ದೇನೆ. ಇಷ್ಟೆಲ್ಲಾ ಆದರು ಜ. 15ರಂದು ಮನೆಗೆ ಬಂದು ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಗ್ರಾಮೀಣ ಠಾಣೆಯಲ್ಲಿ ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ.