ಕಾರವಾರ : ಸರ್ಕಾರಿ ಆಸ್ಪತ್ರೆಗಳನ್ನು ಕಂಡರೆ ಮೂಗು ಮುರಿಯುವವರೇ ಹೆಚ್ಚು. ಆಸ್ಪತ್ರೆಯ ಸ್ಥಿತಿ, ಸರಿಯಾಗಿ ಸ್ಪಂದಿಸದ ವೈದ್ಯರು, ಔಷಧಿಗಳಿಲ್ಲದ ಮಳಿಗೆಗಳಿಂದ ಬೇಸತ್ತ ಅದೆಷ್ಟೋ ಮಂದಿ ಮತ್ತೆ ಸರಕಾರಿ ಆಸ್ಪತ್ರೆಗಳತ್ತ ಮುಖಮಾಡದೆ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಂದು ಸರ್ಕಾರಿ ಆಸ್ಪತ್ರೆ ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲದಂತೆ ಸೇವೆ ಒದಗಿಸುತ್ತಿದೆ. ಜನಸಾಮಾನ್ಯರ ಪಾಲಿಗೆ ಸಂಜೀವಿನಿಯಾಗಿದೆ.
ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಸರ್ಕಾರಿ ಆಸ್ಪತ್ರೆ ಯಾವುದೇ ಖಾಸಗಿ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ಸಾರ್ವಜನಿಕರಿಗೆ ಸೇವೆ ಒದಗಿಸುತ್ತಿದೆ. ಸುಸಜ್ಜಿತ ಕಟ್ಟಡ, ಸ್ವಚ್ಛತೆಯಿಂದ ಕೂಡಿದ ಆಸ್ಪತ್ರೆ, ಸಮಸ್ಯೆಗೆ ಸ್ಪಂದಿಸುವ ವೈದ್ಯರು, ರೋಗಿಗಳಿಗೆ ಬೇಕಾಗುವ ಎಲ್ಲ ರೀತಿಯ ಸೌಲಭ್ಯ. ಹೀಗೆ ಸುವ್ಯವಸ್ಥಿತವಾದ ಆಸ್ಪತ್ರೆ ಇದಾಗಿದೆ. ಇವೆಲ್ಲವೂ ಸರ್ಕಾರ ನೀಡಿದ ಸೌಲಭ್ಯಗಳಲ್ಲ.
ಬದಲಾಗಿ ಕೊಡುಗೈ ದಾನಿಗಳಿಂದ ಹಣ ಸಂಗ್ರಹಿಸಿ ಸರ್ಕಾರಿ ಆಸ್ಪತ್ರೆಯನ್ನು ಸುಸಜ್ಜಿತಗೊಳಿಸಲಾಗಿದೆ. ಹವಾನಿಯಂತ್ರಿತ ಕೊಠಡಿ, ಡಯಾಬಿಟಿಸ್ ಕೊಠಡಿ, 100 ಬೆಡ್ ವ್ಯವಸ್ಥೆ, ICU, ಸೂಪರ್ ಸ್ಪೆಷಲ್, ಡಿಲಕ್ಸ್ ರೂಮ್ಸ್ ಸೇರಿ ಹಲವು ರೀತಿಯ ಸೌಕರ್ಯವನ್ನು ಈ ಆಸ್ಪತ್ರೆ ಹೊಂದಿದೆ. ದಾನಿಗಳ ನೆರವಿನಿಂದ ಸರ್ಕಾರಿ ಆಸ್ಪತ್ರೆಯೊಂದು ಖಾಸಗಿ ಆಸ್ಪತ್ರೆಯನ್ನು ಮೀರಿಸಿದ ಸೇವೆಯನ್ನು ನೀಡುತ್ತಿರುವುದಾಗಿ ಆರೋಗ್ಯಾಧಿಕಾರಿ ಸವಿತಾ ಕಾಮತ್ ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಆಸ್ಪತ್ರೆಯ ಮೇಲ್ಛಾವಣಿ ಸಂಪೂರ್ಣ ಹದಗೆಟ್ಟು ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಸೋರತೊಡಗಿತ್ತು. ಜೊತೆಗೆ ರೋಗಿಗಳಿಗೆ ಬೇಕಾದ ಸೂಕ್ತ ವ್ಯವಸ್ಥೆಗಳಿಲ್ಲದೆ ಸರ್ಕಾರಿ ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಈ ಸಂದರ್ಭದಲ್ಲಿ ಆರೋಗ್ಯಾಧಿಕಾರಿಯಾಗಿ ಬಂದ ಸವಿತಾ ಕಾಮತ್ ಮೊದಲು ಆಸ್ಪತ್ರೆಯ ರಿಪೇರಿಗೆ ಮುಂದಾಗಿದ್ದರು.
ಈ ಬಗ್ಗೆ ಇನ್ಫೋಸಿಸ್ ಸಂಸ್ಥೆಯನ್ನು ಸಂಪರ್ಕಿಸಿದ್ದರು. ಅಂತೆಯೇ ದೊರೆತ 20 ಲಕ್ಷ ಅನುದಾನದಿಂದ ಆಸ್ಪತ್ರೆಯನ್ನು ಮಾರ್ಪಾಡು ಮಾಡಲಾಯಿತು. ಜೊತೆಗೆ ಆಸ್ಪತ್ರೆಗೆ ಬಣ್ಣ ಬಳಿಯಲು ಸ್ಥಳೀಯ ದಾನಿಗಳ ನೆರವನ್ನು ಪಡೆಯಲಾಯಿತು. ಇಂದು ದಾನಿಗಳ ನೆರವಿನಿಂದ ಡಯಾಬಿಟಿಸ್ ಕೊಠಡಿ, ICU, ಹವಾನಿಯಂತ್ರಿತ ಕೊಠಡಿ, ಡೆಲಿವರಿ ಕೊಠಡಿ, ಜನರಲ್ ವಾಡ್೯ಗಳನ್ನು ಹೊಂದಿ ಆಸ್ಪತ್ರೆಯ ಚಿತ್ರಣವೇ ಬದಲಾಗಿದೆ. ಸವಿತಾ ಕಾಮತ್ ಅವರ ಕಾರ್ಯದಿಂದ ಮಾದರಿ ಸರ್ಕಾರಿ ಆಸ್ಪತ್ರೆಯಾಗಿ ಹೊರಹೊಮ್ಮಿದೆ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.
ಓದಿ : ಇಂದು ಜಮ್ಮು ಕಾಶ್ಮೀರಕ್ಕೆ ಮೋದಿ : 20 ಸಾವಿರ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ