ಕಾರವಾರ: ವಿಶ್ವದಾದ್ಯಂತ ಆವರಿಸುತ್ತಿರುವ ಕೊರೊನಾ ವೈರಸ್ನಿಂದ ಜನ ಆತಂಕಕ್ಕೀಡಾಗಿದ್ದಾರೆ. ಆದ್ರೆ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ನಾಟಿ ವೈದ್ಯರೋರ್ವರು ಮನೆ ಔಷಧಿ ಬಳಕೆಗೆ ಸಲಹೆ ನೀಡಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಧಾರೇಶ್ವರದ ನಾಟಿ ವೈದ್ಯ ಪಿ.ಎನ್. ಹೆಗಡೆ, ಕೊರೊನಾ ವೈರಸ್ ತಡೆಗಟ್ಟಲು ಮನೆ ಔಷಧಿ ಬಗ್ಗೆ ಮಾಹಿತಿ ನೀಡಿದ್ದಾರೆ. ಸರ್ವರೋಗಕ್ಕೂ ತುಳಸಿಯೇ ಮಹಾ ಔಷಧಿ ಎಂಬುದು ಆಯುರ್ವೇದಿಕ್ ನಿಘಂಟಿನಲ್ಲಿದೆ. ಕೊರೊನಾ ತಗುಲಿದರೆ ತುಳಸಿಯ 5 ಎಲೆಯನ್ನು ಕೈಯಲ್ಲಿ ತಿಕ್ಕಿ ರಸದ ವಾಸನೆಯನ್ನ ತೆಗೆದುಕೊಳ್ಳುವುದರಿಂದ ವೈರಾಣು ನಾಶವಾಗುತ್ತದೆ. ದಿನದಲ್ಲಿ ಮೂರು ನಾಲ್ಕು ಬಾರಿ ಈ ರೀತಿ ಮಾಡಿದರೆ ರೋಗ ತಗುಲುವುದಿಲ್ಲ. ರೋಗ ತಗಲಿದರೂ ಎರಡು ತಾಸಿಗೆ ಒಮ್ಮೆ ಹೀಗೆ ಮಾಡುವುದರಿಂದ ಹರಡುವಿಕೆ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.
ಇದಲ್ಲದೆ ತುಳಸಿ ಎಲೆ, ಶುಂಠಿ, ಲಿಂಬೆ ರಸ, ಮೆಣಸಿನ ಕಾಳು, ಜೇಷ್ಟ ಮದ್ದಿನ ಪೌಡರ್, ಇಪ್ಪಲಿ ಕರೆ ಪೌಡರ್, ಇರುಳ್ಳಿ, ಬೆಳ್ಳುಳ್ಳಿ, ವಾಯುವಿಳಂಗ ಕಾಳು ಎಲ್ಲವನ್ನು ಸೇರಿಸಿ ಮಿಕ್ಸಿಯಲ್ಲಿ ಅರೆದು ಬಳಿಕ ಕುದಿಸಬೇಕು. ತಣ್ಣಗಾದ ಮೇಲೆ ಶುದ್ಧ ಜೇನುತುಪ್ಪವನ್ನು 4 ಚಮಚ ಸೇರಿಸಿ ಪ್ರತಿದಿನ ಆಹಾರದ ನಂತರ ಬೆಳಗ್ಗೆ ಒಂದು ಚಮಚ, ಮಧ್ಯಾಹ್ನ ಆಹಾರದ ನಂತರ ಒಂದು ಚಮಚ, ರಾತ್ರಿ ಆಹಾರದ ನಂತರ ಒಂದು ಚಮಚ ಸೇವಿಸಬೇಕು. ಪ್ರತಿ ಸಲ ಔಷಧ ಸೇವಿಸಿದ 10 ನಿಮಿಷದ ನಂತರ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು ಎಂದು ಈ ನಾಟಿ ವೈದ್ಯ ಸಲಹೆ ನೀಡಿದ್ದಾರೆ.