ಕಾರವಾರ: ಬುಡಕಟ್ಟು ಸಿದ್ದಿ ಸಮುದಾಯದವರಿಗೆ ಪೌಷ್ಠಿಕ ಆಹಾರ ಒದಗಿಸುವ ಸಂಬಂಧ ದಶಕಗಳ ಹಿಂದೆ ವರ್ಷದ ಆರು ತಿಂಗಳುಗಳು ಪೌಷ್ಠಿಕ ಆಹಾರದ ಕಿಟ್ ವಿತರಿಸಲಾಗುತಿತ್ತು. ಆದರೆ, ಸದ್ಯ ಕಾಂಗ್ರೆಸ್ ಸರ್ಕಾರವು ಈ ಕಿಟ್ ಅನ್ನು ಪ್ರತಿ ತಿಂಗಳೂ ನೀಡಲು ಮುಂದಾಗಿದೆಯಾದರೂ, ಟೆಂಡರ್ ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ ಸಿದ್ದಿಗಳಿಗೆ ಸಿಗಬೇಕಿದ್ದ ಪೌಷ್ಠಿಕ ಆಹಾರ ಕಳೆದ ಆರು ತಿಂಗಳಿಂದ ಬಾರದಂತಾಗಿದೆ.
ಉತ್ತರಕನ್ನಡ ಜಿಲ್ಲೆಯ ಸಿದ್ದಿ ಬುಡಕಟ್ಟು ಸಮುದಾಯಕ್ಕೆ ವಿಶೇಷ ಗಿರಿಜನ ಯೋಜನೆಯಡಿ ಪೌಷ್ಠಿಕ ಆಹಾರವನ್ನು ನೀಡಲಾಗುತ್ತಿತ್ತು. 2011ರಿಂದ ಈ ಯೋಜನೆ ಪ್ರಾರಂಭಗೊಂಡಿದ್ದು, ಸಮಾಜ ಕಲ್ಯಾಣ ಇಲಾಖೆಯಿಂದ ಪ್ರತಿ ಆರು ತಿಂಗಳ ಕಾಲ ಅಂದರೆ ಜೂನ್‌ನಿಂದ ಡಿಸೆಂಬರ್‌ವರೆಗೆ ಉಚಿತ ಪೌಷ್ಠಿಕ ಆಹಾರ ವಿತರಿಸಲಾಗುತ್ತದೆ. ಈ ಗಿರಿಜನ ಯೋಜನೆಯಡಿ 6,000 ಸಿದ್ದಿ ಕುಟುಂಬಗಳಿಗೆ ಪ್ರತಿ ತಿಂಗಳು ತಲಾ 8 ಕೆ.ಜಿ ಅಕ್ಕಿ, 30 ಕೋಳಿ ಮೊಟ್ಟೆ, 6 ಕೆ.ಜಿ ವಿವಿಧ ಬೇಳೆಕಾಳು, ಒಂದು ಲೀಟರ್‌ನ ಎರಡು ಪ್ಯಾಕೆಟ್ ಅಡುಗೆ ಎಣ್ಣೆ, ಅರ್ಧ ಲೀಟರ್ ತುಪ್ಪ, ಒಂದು ಕೆ.ಜಿ ಬೆಲ್ಲ, ಒಂದು ಕೆ.ಜಿ ಸಕ್ಕರೆ, ಮೂರು ಕೆ.ಜಿ ತೊಗರಿ ಬೇಳೆ ಹಾಗೂ ಇತರ ಕಾಳುಗಳು ದೊರೆಯುತ್ತಿತ್ತು. ಆದರೆ, ಕಳೆದ 6 ತಿಂಗಳಿನಿಂದ ಇದ್ಯಾವುದು ಕೂಡ ಸಿದ್ದಿ ಬುಡಕಟ್ಟು ಸಮುದಾಯದ ಜನರಿಗೆ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
''ಬಹುತೇಕ ಕೂಲಿ ನಾಲಿ ಮಾಡಿ ಬದುಕುತ್ತಿದ್ದ ನಮಗೆ ಕಿಟ್ ಸಾಕಷ್ಟು ನೆರವಾಗಿತ್ತು. ಆದರೆ ಇದೀಗ ಏಕಾಏಕಿ ಬಂದ್ ಮಾಡಿರುವುದು ನಮ್ಮ ಹೊಟ್ಟೆ ಮೇಲೆ ಹೊಡೆದಂತಾಗಿದೆ'' ಎಂದು ಕರ್ನಾಟಕ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘದ ಅಧ್ಯಕ್ಷ ಬೆನೆಟ್ ಸಿದ್ದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿದ್ದಿ ಸಮುದಾಯವು ಎಸ್‌ಟಿ ಜನಾಂಗದಡಿ ಬರುತ್ತಿದ್ದು, ಇವರಿಗೆ ಪೌಷ್ಠಿಕ ಆಹಾರ ನೀಡಬೇಕೆಂಬ ಉದ್ದೇಶದಿಂದ ಸರ್ಕಾರದಿಂದ ಈ ಯೋಜನೆ ಪ್ರಾರಂಭ ಮಾಡಲಾಗಿತ್ತು. ಈ ವರ್ಷ ಜೂನ್ ತಿಂಗಳಿಂದ ಈ ಸವಲತ್ತಿಗೆ ಅಡ್ಡಿಯಾಗಿದೆ. ಈ ವರ್ಷ ಮಳೆಯಾಗದ ಕಾರಣ ಜನರಿಗೆ ಅಷ್ಟೊಂದು ಕೂಲಿ ಕೆಲಸವೂ ಇಲ್ಲ. ಇದರಿಂದ ಸಮುದಾಯದ ಜನರು ಉಪವಾಸ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೌಷ್ಠಿಕ ಆಹಾರ ದೊರೆಯದ ಬಗ್ಗೆ ಈಗಾಗಲೇ ಶಾಸಕರು, ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಕೂಡಲೇ ಸರ್ಕಾರ ಪೌಷ್ಠಿಕ ಆಹಾರ ಒದಗಿಸದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸಮುದಾಯದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಿ ಪ್ರತಿಕ್ರಿಯೆ: ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ವೈ.ಕೆ ಉಮೇಶ, 'ಈ ಹಿಂದೆ 6 ತಿಂಗಳಿಗೆ ನೀಡಲಾಗುತ್ತಿತ್ತು. ಆದರೆ, ಇದೀಗ ಹೊಸ ಸರ್ಕಾರ ಬಂದ ಬಳಿಕ ತಿಂಗಳಿಗೊಮ್ಮೆ ನೀಡಲು ಸೂಚಿಸಿದೆ. ಅದರಂತೆ 3 ತಿಂಗಳಿಗೆ ಅಲ್ಪಾವಧಿ ಟೆಂಡರ್ ಕರೆಯಲು ಅವಕಾಶ ನೀಡಲಾಗಿದೆ. ಸದ್ಯ ಜಿಲ್ಲಾಧಿಕಾರಿ ಅನುಮತಿಯೊಂದಿಗೆ ಟೆಂಡರ್ ಕರೆದಿದ್ದು, ಕಳೆದ ಸೋಮವಾರ ಆಹಾರದ ಕ್ವಾಂಟಿಟಿ ಚೆಕ್ ಮಾಡಿ ತೆರಳಿದ್ದಾರೆ. ಮುಂದಿನ 15 ದಿನದಲ್ಲಿ ಈ ಪ್ರಕ್ರಿಯೆ ಮುಗಿದು. ಆಹಾರ ವಿತರಣೆ ಮಾಡುವ ಸಾಧ್ಯತೆ ಇದೆ'' ಎಂದು ತಿಳಿಸಿದ್ದಾರೆ.