ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಒತ್ತಾಯಿಸಿ ನಿರಂತರ ಪ್ರತಿಭಟನೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತಿಭಟನಾಕಾರು ರಕ್ತದಿಂದ ಪತ್ರ ಬರೆದು ವಿಭಿನ್ನ ಹೋರಾಟ ನಡೆಸಿದರು.
ಜಿಲ್ಲೆಯಲ್ಲಿ ನಡೆದ ಆಂಬ್ಯುಲೆನ್ಸ್ ಅಪಘಾತದ ಬಳಿಕ ಸುಸಜ್ಜಿತ ಆಸ್ಪತ್ರೆಯ ಕೂಗು ಜೋರಾಗತೊಡಗಿದೆ. ಟ್ವಿಟ್ಟರ್ ಅಭಿಯಾನ, ಉಪವಾಸ ಸತ್ಯಾಗ್ರಹ, ಅಣಕು ಪ್ರತಿಭಟನೆ ಹೀಗೆ ಹತ್ತಾರು ರೀತಿಯಲ್ಲಿ ಪಕ್ಷಾತೀತವಾಗಿ ಹೋರಾಟ ನಡೆಯುತ್ತಿದೆ. ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ಪಾಲ್ಗೊಂಡಿದ್ದಾರೆ. ಇಂದು 85 ವರ್ಷದ ವೃದ್ಧೆ, 8 ತಿಂಗಳ ಗರ್ಭಿಣಿಯೂ ಹೋರಾಟದಲ್ಲಿ ಭಾಗವಹಿಸಿದ್ದು ಕಂಡುಬಂತು.
"ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಇಲ್ಲದ ಕಾರಣ ಅದೆಷ್ಟೋ ಮಂದಿ ರಸ್ತೆಯಲ್ಲಿಯೇ ಪ್ರಾಣ ಬಿಡುತ್ತಿದ್ದಾರೆ. ಕೂಡಲೇ ಪ್ರಧಾನಿ ಮೋದಿಯವರು ಸುಸಜ್ಜಿತ ಆಸ್ಪತ್ರೆ ಮಂಜೂರು ಮಾಡಲು ಅಗತ್ಯ ಕ್ರಮಕೈಗೊಳ್ಳಬೇಕು. ಆಗಸ್ಟ್ 15 ರ ಸ್ವಾತಂತ್ರ್ಯೋತ್ಸವದ ಒಳಗಾಗಿ ಈ ಬಗ್ಗೆ ಘೋಷಣೆ ಮಾಡಬೇಕು. ಇಲ್ಲದಿದ್ದಲ್ಲಿ ನಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ" ಎಂದು ಹೋರಾಟಗಾರ ರಾಘು ನಾಯ್ಕ್ ಎಚ್ಚರಿಕೆ ನೀಡಿದರು.
"ಎಲ್ಲರ ಅನುಕೂಲಕ್ಕೋಸ್ಕರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಬೇಕು. ನಮ್ಮ ಯಾವುದೇ ಆರೋಗ್ಯ ಸಮಸ್ಯೆಗಳಿಗೆ ಮಂಗಳೂರಿನ ಆಸ್ಪತ್ರೆಗಳನ್ನು ಅವಲಂಬಿಸಬೇಕಾಗುತ್ತಿದೆ. ಇದರಿಂದಾಗಿ ಮಕ್ಕಳು, ವೃದ್ಧರು, ಮಹಿಳೆಯರು ಪರದಾಡುವಂತಾಗಿದೆ. ಈ ಕೂಡಲೇ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವಂತೆ ನಾವು ರಕ್ತದಲ್ಲಿ ಪತ್ರ ಬರೆದು ಪ್ರಧಾನಿ ಮೋದಿಯರಲ್ಲಿ ಒತ್ತಾಯಿಸಿದ್ದೇವೆ" ಎಂದು ಅಭಿಯಾನದಲ್ಲಿ ಪಾಲ್ಗೊಂಡಿದ್ದ ಮಹಿಳೆ ಪ್ರಶಾಂತಿ ಹೇಳಿದರು.
ಇದನ್ನೂ ಓದಿ:'ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ’: ಹುಬ್ಬಳ್ಳಿ ಅಭಿಮಾನಿ ಬಳಗದಿಂದ ಆಲ್ಬಂ ಸಾಂಗ್