ಕಾರವಾರ: ಕುಗ್ರಾಮ ಎಂಬ ಹಣೆಪಟ್ಟಿ ಕಟ್ಟಿಕೊಂಡು ಹತ್ತಾರು ಸಮಸ್ಯೆಗಳಿಂದ ಬಳಲುತ್ತಿರುವ ಕುಮಟಾ ತಾಲೂಕಿನ ಮೇದನಿ ಗ್ರಾಮಕ್ಕೆ ಉತ್ತರಕನ್ನಡ ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಭೇಟಿ ನೀಡಲಿದ್ದು, ಒಂದು ದಿನ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ.
ಕುಮಟಾ ಪಟ್ಟಣದಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ಸೊಪ್ಪಿನ ಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇದನಿಯಲ್ಲಿ ಜನವರಿ 4 ರಂದು ತೆರಳಲಿದ್ದು, ಅಂದು ಅಲ್ಲಿಯ ಜನರೊಂದಿಗೆ ಬೆರೆತು ಸುಖ ದುಃಖಗಳನ್ನು ಆಲಿಸಲು ಮುಂದಾಗಿದ್ದಾರೆ.
ಪ್ರಸ್ತುತ ಮೇದನಿ ಗ್ರಾಮವು ರಸ್ತೆ, ವಿದ್ಯುತ್, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಹತ್ತಾರು ಸಮಸ್ಯೆಗಳಿಂದ ಬಳಲುತ್ತಿದೆ. ಕುಮಟಾ -ಸಿದ್ದಾಪುರ ಮುಖ್ಯ ರಸ್ತೆಯಿಂದ 8 ಕಿ.ಮೀ ದೂರದಲ್ಲಿದ್ದು ಘಟ್ಟ ಪ್ರದೇಶದ ಕಡಿದಾದ ಹಾದಿಯಲ್ಲಿ ಸಾಗಬೇಕಾಗಿದೆ. ಮೇದನಿ ಬಗ್ಗೆ ತಿಳಿದ ಮತ್ತು ಇತ್ತೀಚೆಗೆ ಸರ್ಕಾರದ ಸೂಚನೆಯಂತೆ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಭೇಟಿ ನೀಡಿ ರಸ್ತೆ ಪರಿಶೀಲಿಸಿದ್ದ ಜಿಲ್ಲಾಧಿಕಾರಿ ಡಾ.ಕೆ. ಹರೀಶಕುಮಾರ್ ಇದೀಗ ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆ. ಇದೇ ಮೊದಲ ಭಾರಿಗೆ ಜಿಲ್ಲಾಧಿಕಾರಿಯೊಬ್ಬರು ಮೇದನಿ ಕುಗ್ರಾಮಕ್ಕೆ ಭೇಟಿ ನೀಡುತ್ತಿದ್ದು, ಗ್ರಾಮಸ್ಥರ ಸಂತಸಕ್ಕೆ ಕಾರಣವಾಗಿದೆ.
ಅಲ್ಲದೆ,ವಾಸ್ತವ್ಯಕ್ಕಾಗಿ ಈಗಾಗಲೇ ಶಾಲಾ ಆವರಣದಲ್ಲಿ ಸಿದ್ದತೆ ಮಾಡಿಕೊಳ್ಳಲಾಗುತ್ತಿದ್ದು, ಗ್ರಾಮದ ಸ್ಥಿತಿಗತಿಗಳ ಬಗ್ಗೆ ಸ್ಥಳೀಯರೊಂದಿಗೆ ಚರ್ಚಿಸಲಿದ್ದಾರೆ. ಜಿಲ್ಲಾಧಿಕಾರಿಗಳ ಜತೆ ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಇತರ ಕೆಲ ಅಧಿಕಾರಿಗಳು ತೆರಳಲಿದ್ದು, ಆರೋಗ್ಯ ಶಿಬಿರ, ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಇದೆ ವೇಳೆ ಹಮ್ಮಿಕೊಳ್ಳಲಾಗಿದೆ.