ಕಾರವಾರ: ವಾರದ ಹಿಂದೆ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಆಗಮಿಸಿದ್ದ ಮುಲೈ ಮುಹಲಿನ್ ನೇತೃತ್ವದ ಅಧಿಕಾರಿಗಳ ತಂಡ ಇಂದು ಭಟ್ಕಳ ತಾಲ್ಲೂಕಿನ ಹಾಡುವಳ್ಳಿ ಗ್ರಾಮಕ್ಕೆ ತೆರಳಿ ಸ್ಥಳೀಯರ ಕುಂದು ಕೊರತೆ ಆಲಿಸುವುದರ ಜೊತೆಗೆ ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವ ಪ್ರಯತ್ನ ನಡೆಸಿದೆ.
ಸರ್ಕಾರ ಜಾರಿಗೊಳಿಸಿರುವ "ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ" ಶೀರ್ಷಿಕೆಯ ಗ್ರಾಮ ವಾಸ್ತವ್ಯದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಂದು ಹಾಡುವಳ್ಳಿ ಗ್ರಾಮಕ್ಕೆ ದೌಡಾಯಿಸಿರುವ ಜಿಲ್ಲಾಧಿಕಾರಿ ಮುಲೈ ಮುಹಲಿನ್ ನೇತೃತ್ವದ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ತಂಡ, 3 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದ್ದ ಹಾಡುವಳ್ಳಿ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವ ಪ್ರಯತ್ನ ನಡೆಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸ್ವತಃ ಜಿಲ್ಲಾಧಿಕಾರಿ ಮುಲೈ ಮುಹಲಿನ್ ಅವರೇ ಜನರನ್ನು ಕರೆದು ಸಮಸ್ಯೆ ಆಲಿಸಿದರು. ಅಂಗವಿಕಲರ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಅಂತ್ಯ ಸಂಸ್ಕಾರ ಯೋಜನೆ ಹೀಗೆ ಹತ್ತಾರು ಸಮಸ್ಯೆಗಳನ್ನು ಹೊತ್ತು ಬಂದಿದ್ದ ಜನರ ಸಮಸ್ಯೆಗಳನ್ನು ಕೇಳಿದ ಜಿಲ್ಲಾಧಿಕಾರಿ ಸ್ಥಳದಲ್ಲಿಯೇ ಅಧಿಕಾರಿಗಳನ್ನು ಕರೆದು ಪರಿಹಾರಕ್ಕೆ ಸೂಚಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮುಲೈ ಮುಹಲಿನ್, ಸರ್ಕಾರ ಮನೆ ಬಾಗಿಲಿಗೆ ತೆರಳಿ ಸರ್ಕಾರಿ ಸೌಲಭ್ಯಗಳನ್ನು ನೀಡಲು ಈ ವಿಶಿಷ್ಟ ಕಾರ್ಯಕ್ರಮ ಆರಂಭಿಸಿದ್ದು, ಬೆಳಗ್ಗೆಯಿಂದ ಆರಂಭಗೊಂಡ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಸಂಜೆ 5 ಗಂಟೆಗೆ ಮುಗಿಯಿತು.