ಕಾರವಾರ: ಕತ್ತಲೆಯಲ್ಲಿ ನಾಯಿ ಬೆನ್ನತ್ತಿದ್ದ ಚಿರತೆಯೊಂದು ಓಡುವ ಬರದಲ್ಲಿ ಮನೆಯೊಂದರ ಬಾವಿಗೆ ಬಿದ್ದಿದ್ದು, ಆ ಚಿರತೆಯನ್ನು ರಕ್ಷಿಸುವಲ್ಲಿ ಪ್ರಾಣಿ ರಕ್ಷಣಾ ಡೇರಿಂಗ್ ಟೀಮ್ ಸದಸ್ಯರು ಯಶಸ್ವಿಯಾಗಿದ್ದಾರೆ.
ಕುಮಟಾ ತಾಲೂಕಿನ ಬರ್ಗಿ ಗ್ರಾಮದ ವಸಂತ್ ನಾಯ್ಕ ಎನ್ನುವವರ ಮನೆಯ ಆವರಣದಲ್ಲಿರುವ ಬಾವಿಗೆ ಚಿರತೆಯೊಂದು ಬಿದ್ದಿತ್ತು. ರೈಲ್ವೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಸಂತ್ ರಾತ್ರಿ ಕೆಲಸಕ್ಕೆಂದು ಹೋದ ಹಿನ್ನೆಲೆಯಲ್ಲಿ ಮನೆಯಲ್ಲಿ ಇರಲಿಲ್ಲ. ಬೆಳಗ್ಗೆ ಮನೆಗೆ ಬಂದು ತೋಟಕ್ಕೆ ನೀರು ಹಾಕಲು ಪಂಪ್ ಆನ್ ಮಾಡಿದಾಗ ನೀರು ಬಂದಿರಲಿಲ್ಲ. ಕೊನೆಗೆ ಬಾವಿಯತ್ತ ಹೋಗಿ ನೋಡಿದಾಗ ಚಿರತೆಯೊಂದು ಬಾವಿಗೆ ಬಿದ್ದಿರುವುದು ತಿಳಿದುಬಂದಿದೆ.
ಬಾವಿಯಲ್ಲಿ ಚಿರತೆ ಬಿದ್ದು ನೀರಿನ ಪಂಪ್ ಸೆಟ್ಗೆ ಹಾಕಿದ್ದ ಪೈಪನ್ನ ಹಿಡಿದು ನೇತಾಡುತ್ತಾ ಚಿರತೆ ಕುಳಿತಿರುವ ದೃಶ್ಯವನ್ನ ಮನೆಯವರು ನೋಡಿದ್ದರು. ಚಿರತೆ ಬಿದ್ದದನ್ನು ಖಚಿತ ಪಡಿಸಿಕೊಂಡ ವಸಂತ್ ನಾಯ್ಕ ತಕ್ಷಣ ವಿಷಯವನ್ನ ಅರಣ್ಯ ಇಲಾಖೆಯವರ ಗಮನಕ್ಕೆ ತಂದಿದ್ದರು.
ಸ್ಥಳಕ್ಕೆ ಆಗಮಿಸಿದ ಡೇರಿಂಗ್ ಟೀಮಿನ ಸದಸ್ಯರು ಸುಮಾರು ಒಂದು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಕೊನೆಗೂ ಚಿರತೆಯನ್ನು ಸುರಕ್ಷಿತವಾಗಿ ಬಲೆಯ ಮೂಲಕ ಮೇಲಕ್ಕೆ ಎತ್ತಿ ಬೋನಿಗೆ ಹಾಕಿದ್ದಾರೆ. ಇನ್ನು ಬಾವಿಗೆ ಬಿದ್ದ ಹೆಣ್ಣು ಚಿರತೆ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.