ಶಿರಸಿ: ವಿದೇಶದಿಂದ ಬಂದ 24 ವರ್ಷದ ಯುವಕನಲ್ಲಿ ಕೊರೊನಾ ವೈರಸ್ ಹರಡಿದೆ ಎಂಬ ಭೀತಿ ಹಬ್ಬಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ ಘಟನೆ ಶಿರಸಿ ತಾಲೂಕಿನ ಇಸಳೂರಿನಲ್ಲಿ ನಡೆದಿದೆ.
ಇಸಳೂರಿನ ಫಯಾಜ್ ಖಾನ್ (24) ಕಳೆದ ಮಾ.4 ರಂದು ದುಬೈನಿಂದ ಸ್ವಗ್ರಾಮಕ್ಕೆ ಮರಳಿದ್ದರು. ಆತ ಬಂದ ನಂತರ ಕೊರೊನಾ ವೈರಸ್ ಲಕ್ಷಣಗಳು ಮಾತ್ರ ಕಾಣಿಸಿಕೊಂಡಿದ್ದವು. ಫಯಾಜ್ ವಿದೇಶದಿಂದ ಬಂದಿದ್ದು, ಆತನಿಗೆ ಕೊರೊನಾ ಸೋಂಕು ಇದೆ ಎಂದು ತಪ್ಪು ತಿಳಿದ ಗ್ರಾಮಸ್ಥರು ಭೀತಿಯಿಂದ ಮನೆ ಬಾಗಿಲು ಹಾಕಿಕೊಂಡ ಪರಿಣಾಮ ಆರೋಗ್ಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ತಪಾಸಣೆ ನಡೆಸಿದ್ದಾರೆ.
ತಪಾಸಣೆ ನಡೆಸಿರುವ ಆರೋಗ್ಯಾಧಿಕಾರಿಗಳು ಆ ಯುವಕನಿಗೆ ಕೊರೊನಾ ವೈರಸ್ ಹರಡಿಲ್ಲವೆಂದು ದೃಢಪಡಿಸಿ, ಯಾವುದೇ ಸಮಸ್ಯೆಯಿಲ್ಲ ಎಂದು ಧೈರ್ಯ ತುಂಬಿದ್ದಾರೆ. ಇದರ ಜೊತೆಗೆ ಶಿರಸಿ ನಗರದಲ್ಲಿ ಸೌದಿ ಅರೇಬಿಯಾದಿಂದ ವಾಪಸಾದ ಮಹಿಳೆವೋರ್ವಳನ್ನು ಸಹ ಆರೋಗ್ಯ ಅಧಿಕಾರಿಗಳು ತಪಾಸಣೆ ನಡೆಸಿದ್ದು, ಶಿರಸಿಯಲ್ಲಿ ಜಾತ್ರೆ ನಡೆಯುತ್ತಿರುವ ಕಾರಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.