ಭಟ್ಕಳ: ಕೊರೊನಾ ವಾರ್ಡ್ನಲ್ಲಿ ಕಾರ್ಯನಿರ್ವಹಿಸಿದ್ದ ವೈದ್ಯರಿಬ್ಬರಿಗೆ ಜ್ವರದ ಲಕ್ಷಣ ಕಂಡುಬಂದು, ಮುಂಜಾಗ್ರತಾ ಕ್ರಮವಾಗಿ ಗಂಟಲಿನ ದ್ರವವನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇಬ್ಬರಿಗೂ ಕೊರೊನಾ ಸೋಂಕು ಇಲ್ಲ ಎಂದು ವರದಿ ಬಂದಿದ್ದು ವೈದ್ಯರು, ಆಸ್ಪತ್ರೆಯ ಸಿಬ್ಬಂದಿ ಹಾಗೂ ಜನತೆ ನಿಟ್ಟುಸಿರು ಬಿಡುವಂತಾಗಿದೆ.
ಸದ್ಯ ಇಬ್ಬರೂ ಕೊರೊನಾ ಪೀಡಿತರಿಗೆ ಚಿಕಿತ್ಸೆ ಮುಂದುವರಿದಿದ್ದು, ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 40 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿರುವುದಾಗಿ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.
ತಾಲೂಕಿನಲ್ಲಿ ಎಲ್ಲಾ ಅಂಗಡಿಗಳನ್ನು ಮುಚ್ಚಿಸಲಾಗುವುದು. ಯಾರೂ ಕೂಡ ಮನೆಯಿಂದ ಹೊರ ಬರಬಾರದು ಎಂದು ಈ ಕ್ರಮ ಕೈಗೊಳ್ಳಲಾಗುತ್ತಿದೆ. ತಾಲೂಕಾಡಳಿತದಿಂದ ಮನೆಮನೆಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗುವುದು ಎಂದು ಉಪವಿಭಾಗಾಧಿಕಾರಿ ಭರತ್ ತಿಳಿಸಿದ್ದಾರೆ.
ಇನ್ನೊಬ್ಬರಲ್ಲಿ ಸೋಂಕು ದೃಢ:
ಪಟ್ಟಣದ ಇನ್ನೊಬ್ಬ ವ್ಯಕ್ತಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಅಧಿಕೃತವಾಗಿ ಇಂದು ಘೋಷಣೆಯಾಗುವ ಸಾಧ್ಯತೆ ಇದೆ.