ಕಾರವಾರ: ಕೊರೊನಾ ಆತಂಕ ಗಣೇಶ ಚತುರ್ಥಿಗೂ ತಟ್ಟಿದೆ. ವಿಜೃಂಭಣೆಯ ಗಣೇಶೋತ್ಸವಕ್ಕೆ ಸರ್ಕಾರ ಕಡಿವಾಣ ಹಾಕಿದ ಪರಿಣಾಮ ಕಾರವಾರದ ಮಾರುಕಟ್ಟೆಯಲ್ಲಿ ಗ್ರಾಹಕರಿಲ್ಲದೆ, ಹಬ್ಬದ ಕಳೆಯೇ ಕುಂದಿದೆ.
ಪ್ರತಿ ವರ್ಷ ಹಬ್ಬ ಇನ್ನು ವಾರ ಇರುವಾಗಲೇ ಮಾರುಕಟ್ಟೆಗಳಲ್ಲಿ ಖರೀದಿ ಕೂಡ ಭರ್ಜರಿಯಾಗಿ ನಡೆಯುತ್ತಿತ್ತು. ಧಾರವಾಡ, ಹುಬ್ಬಳ್ಳಿ, ಹಾವೇರಿ ಭಾಗಗಳಿಂದ ವ್ಯಾಪಾರಸ್ಥರು ಹೂವು, ಹಣ್ಣು, ತರಕಾರಿಗಳು ತಂದು ಮಾರಾಟ ಮಾಡುತ್ತಿದ್ದರು. ಆದರೆ ಕೊರೊನಾ ಪರಿಣಾಮ ವ್ಯಾಪಾರಸ್ಥರು ಕೂಡ ಅಷ್ಟಾಗಿ ಬಂದಿಲ್ಲ. ನಗರದ ಸವಿತಾ ಸರ್ಕಲ್ ಗಾಂಧಿ ಮಾರುಕಟ್ಟೆಗಳಲ್ಲಿ ಕೆಲವೇ ಕೆಲವು ಮಂದಿ ಹಬ್ಬದ ವಸ್ತುಗಳನ್ನು ಖರೀದಿ ಮಾಡಿ ತೆರಳಿದ್ದಾರೆ. ಕಳೆದ ಬಾರಿಯ ಅರ್ಧದಷ್ಟು ವ್ಯಾಪಾರ ಆಗಿಲ್ಲ.ಇದರಿಂದ ಹೂವು ಹಣ್ಣು ಹಾಗೆ ಉಳಿದಿದ್ದು ಸಾಕಷ್ಟು ನಷ್ಟವಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.
ಕಾರವಾರ ಗೋವಾ ಹಾಗೂ ಮಹರಾಷ್ಟ್ರ ಗಡಿಭಾಗದಲ್ಲಿರುವುದರಿಂದ ಗಣೇಶೋತ್ಸವ ಯಾವಾಗಲೂ ಅದ್ಧೂರಿಯಾಗಿ ನಡೆಯುತ್ತಿತ್ತು. ನೂರಾರು ವಿಭಿನ್ನ ಗಣಪತಿಗಳನ್ನು ಸ್ಥಾಪಿಸಲಾಗುತಿತ್ತು. ಆದರೆ ಕೊರೊನಾದಿಂದಾಗಿ ಗಡಿಯಾಚೆ ಇದ್ದವರು ಗಡಿದಾಟಿ ಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಬ್ಬದ ಕಳೆ ಸಹಜವಾಗಿ ಕಡಿಮೆಯಾಗಿದೆ.
ಗಣೇಶ ಹಬ್ಬವನ್ನು ಎರಡು ದಿನ ಸರಳವಾಗಿ ಆಚರಿಸಲು ಉತ್ತರ ಕನ್ನಡ ಜಿಲ್ಲಾಡಳಿತ ಸೂಚಿಸಿದೆ. ಇದರಿಂದ ಸರ್ಕಾರದ ನಿಯಮವನ್ನು ಯಥಾವತ್ತಾಗಿ ಪಾಲಿಸಲು ಜಿಲ್ಲಾಧಿಕಾರಿ ಡಾ.ಕೆ. ಹರೀಶಕುಮಾರ್ ಜನರಿಗೆ ಮನವಿ ಮಾಡಿದ್ದಾರೆ. ಕೊರೊನಾ ತಡೆಯುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು. ಹೆಚ್ಚು ಜನ ಸೇರದೆ ಕೊರೊನಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಹಬ್ಬ ಆಚರಿಸಬೇಕು. ಯಾರಾದರೂ ನಿಯಮ ಉಲ್ಲಂಘಿಸಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.