ಕಾರವಾರ(ಉತ್ತರ ಕನ್ನಡ): ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕಾರಣಿಗಳ ಮೇಲೆ ಆರೋಪ ಪ್ರತ್ಯಾರೋಪಗಳು ಕೇಳಿಬರುವುದು ಸಾಮಾನ್ಯ. ಕೆಲ ರಾಜಕಾರಣಿಗಳು ಇದನ್ನು ಚುನಾವಣಾ ಪ್ರಚಾರದ ಅಸ್ತ್ರವಾಗಿಯೂ ಬಳಕೆ ಮಾಡಿಕೊಳ್ಳುತ್ತಾರೆ. ಉತ್ತರಕನ್ನಡ ಜಿಲ್ಲೆಯ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಮೇಲೆ ಸಹ ಇದೀಗ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿ ಬಂದಿದೆ. ಶಾಸಕರಾದ ನಂತರ ರೂಪಾಲಿ ನಾಯ್ಕ ಕೋಟಿಗಟ್ಟಲೇ ಆಸ್ತಿಗಳಿಕೆ ಮಾಡಿ ಐಷಾರಾಮಿ ಕಾರುಗಳನ್ನು ಖರೀದಿ ಮಾಡಿದ್ದಾರೆ ಎನ್ನುವ ಆರೋಪವನ್ನು ಸ್ಥಳೀಯ ಗುತ್ತಿಗೆದಾರರ ಸಂಘದವರು ಮಾಡಿದ್ದಾರೆ.
ರೂಪಾಲಿ ನಾಯ್ಕ ಅವರು ಶಾಸಕಿ ಆಗುವ ಮುನ್ನ ಕೆಲ ಬ್ಯಾಂಕುಗಳಲ್ಲಿ ತೆಗೆದ ಸಾಲದ ಹಣ ಕಟ್ಟಲು ಆಗದ ಪರಿಸ್ಥಿತಿಯಲ್ಲಿ ಇದ್ದರು. ಆದರೆ ಸದ್ಯ ಅವರು ಕೋಟಿಗಟ್ಟಲೇ ಆಸ್ತಿಯನ್ನು ಮಾಡಿಕೊಂಡಿದ್ದಾರೆ. ಐಷಾರಾಮಿ ಕಾರುಗಳನ್ನು ಖರೀದಿ ಮಾಡಿದ್ದಾರೆ. ಮಗನ ಮದುವೆಯನ್ನು ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದು, ಇದಕ್ಕೆಲ್ಲಾ ಎಲ್ಲಿಂದ ಹಣ ಬಂತು ಎಂಬುದನ್ನು ತಿಳಿಸಲಿ. 40 ಪರ್ಸೆಂಟ್ ಕಮಿಷನ್ ವಿಚಾರ ಕಾರವಾರದಿಂದಲೇ ಪ್ರಾರಂಭವಾಗಿದ್ದು, ಈ ಆರೋಪ ಸಹ ಅವರ ಮೇಲೆ ಇದೆ. ಅಕ್ರಮವಾಗಿ ಹಣ ಸಂಗ್ರಹಿಸಿ ಇಷ್ಟೊಂದು ದೊಡ್ಡ ಮಟ್ಟದ ಆಸ್ತಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕಿ ರೂಪಾಲಿ ನಾಯ್ಕ ನನ್ನ ಮೇಲೆ ಯಾವುದೇ ಆಧಾರ ಇಲ್ಲದೇ ಸುಮ್ಮನೇ ಆರೋಪ ಮಾಡುತ್ತಿದ್ದಾರೆ. ಅವರಲ್ಲಿ ಯಾವುದೇ ಆಧಾರ ಇದ್ದರೆ ಕೊಡಲಿ. ನಾನು ನ್ಯಾಯಾಲಯದ ಮೂಲಕವೇ ಇದಕ್ಕೆ ಉತ್ತರಿಸುತ್ತೇನೆ. ನಾವು ಲೋಕಾಯುಕ್ತಕ್ಕೆ ಪ್ರತಿವರ್ಷ ನಮ್ಮ ಆಸ್ತಿ ಖರೀದಿ ದಾಖಲೆಯನ್ನು ಕೊಡಬೇಕು. ಹಾಗೇ ಆದಾಯ ತೆರಿಗೆ ಇಲಾಖೆಗೂ ನಾವು ದಾಖಲೆ ನೀಡುತ್ತೇವೆ. ರಸ್ತೆ ಮೇಲೆ ಕುಳಿತವರಿಗೆ ನಾವು ದಾಖಲೆ ಕೊಡುವ ಅಗತ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ಸದ್ಯ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ನನಗೆ ಟಿಕೆಟ್ ತಪ್ಪಿಸುವ ಸಲುವಾಗಿ ಮಾಜಿ ಶಾಸಕರುಗಳ ಪಿತೂರಿಯಿಂದ ಭ್ರಷ್ಟಾಚಾರ ಆರೋಪವನ್ನು ಮಾಡಿಸುತ್ತಿದ್ದಾರೆ. ಆದರೆ ಅದು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಶಾಸಕಿ ರೂಪಾಲಿ ನಾಯ್ಕ ಆರೋಪಿಸಿದ್ದಾರೆ. ಒಟ್ಟಿನಲ್ಲಿ ಸದ್ಯ ಕಾರವಾರ ಅಂಕೋಲಾ ಕ್ಷೇತ್ರದಲ್ಲಿ ಚುನಾವಣಾ ಕಾವು ರಂಗೇರುತ್ತಿದ್ದು, ಜನಪ್ರತಿನಿಧಿಗಳ ಆರೋಪ ಪ್ರತ್ಯಾರೋಪದ ಮುಸುಕಿನ ಗುದ್ದಾಟ ಯಾವ ಹಂತ ತಲುಪಲಿದೆ ಅನ್ನೋದನ್ನು ಕಾದು ನೋಡಬೇಕು.
ಇದನ್ನೂ ಓದಿ : ಸುಳ್ಳು ಭರವಸೆಗಳ ಬಿಜೆಪಿ ಸರ್ಕಾರ, ಕಾಮೇಗೌಡರ ಪುತ್ರನಿಗೆ ನೌಕರಿ ನೀಡಿಲ್ಲ: ಸಿದ್ದರಾಮಯ್ಯ ಟೀಕೆ