ಕಾರವಾರ : ತೆಂಗಿನಕಾಯಿ ಬಳಸಿದ ನಂತರ ಚಿಪ್ಪನ್ನು ಎಸೆಯುತ್ತಾರೆ ಅಥವಾ ಉರುವಲಾಗಿ ಬಳಸುತ್ತಾರೆ. ಆದರೆ, ಇಲ್ಲಿ ಒಬ್ಬ ಕಲಾವಿದ ಕಲಾಕೃತಿಗಳನ್ನು ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ಮಾಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರು ಗ್ರಾಮದಲ್ಲಿ ಶಿವಮೂರ್ತಿ ಭಟ್ ಸುಮಾರು 400ಕ್ಕೂ ಅಧಿಕ ಕಲಾಕೃತಿಗಳನ್ನ ರೂಪಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಬಾಲ್ಯದಿಂದಲೇ ಕಲೆಯ ಬಗ್ಗೆ ಆಸಕ್ತಿ ಹೊಂದಿದ್ದ ಶಿವಮೂರ್ತಿ ಭಟ್, ಮರದ ಬೇರು, ಕಲ್ಲು ಹೀಗೆ ಬಳಸಿ ಬಿಸಾಡಿದ ನಿರುಪಯುಕ್ತ ಎನಿಸಿಕೊಂಡ ವಸ್ತುಗಳನ್ನ ತಂದು ಕಲಾಕೃತಿಗಳನ್ನ ರೂಪಿಸುತ್ತಿದ್ದರು. ಈ ವೇಳೆ ತೆಂಗಿನ ಚಿಪ್ಪುಗಳಿಂದ ಕಲಾಕೃತಿಗಳನ್ನ ರಚಿಸುವ ಹವ್ಯಾಸವನ್ನು ಬೆಳೆಸಿಕೊಂಡರು. ಸೂಕ್ಷ್ಮ, ಅತೀ ಸೂಕ್ಷ್ಮ ಕೆತ್ತನೆ ಮೂಲಕ ತೆಂಗಿನ ಚಿಪ್ಪುಗಳಿಗೆ ಸುಂದರ ರೂಪ ನೀಡಿದ್ದಾರೆ.
ತೆಂಗಿನ ಚಿಪ್ಪುಗಳು ನಾಜೂಕು ಸ್ಪರ್ಶದ ಕೆತ್ತನೆ ಮೂಲಕ ನೂರಾರು ಕಲಾಕೃತಿಗಳು ಜೀವಪಡೆದುಕೊಂಡಿವೆ. ಪ್ರಾಣಿಗಳು, ಪಕ್ಷಿಗಳು, ಮನುಷ್ಯರು, ದೇವರ ರೂಪಗಳನ್ನು ತೆಂಗಿನ ಚಿಪ್ಪಿನಲ್ಲಿ ಕೆತ್ತನೆ ಮಾಡಿದ್ದಾರೆ. ಇನ್ನೂರಕ್ಕೂ ಅಧಿಕ ಕಲಾಕೃತಿಗಳು ತೆಂಗಿನ ಚಿಪ್ಪಿನಲ್ಲೇ ಸಿದ್ದವಾಗಿದ್ದು, ಉಳಿದವು ಮರದ ಬೇರುಗಳಿಂದ ರೂಪಿತವಾಗಿವೆ. ಒಂದು ಇಂಚಿನಿಂದ ಹಿಡಿದು ಹತ್ತಾರು ಅಡಿ ಎತ್ತರದ ಕಲಾಕೃತಿಗಳನ್ನು ಮಾಡಿದ್ದಾರೆ.
ಅಪ್ಪನ ಕಲ್ಲು ಕೆತ್ತನೆ ಕಲೆಯಿಂದ ಪ್ರೇರೇಪಿತನಾದ ಮಗ ಇಂದು ಇಷ್ಟೊಂದು ಅದ್ಭುತ ಕಲೆ ಕೆತ್ತನೆ ಮೂಲಕ ಸಾಧನೆ ಮಾಡಿದ್ದಾರೆ. ಮುಂದೆ ಎಲ್ಲ ಕಲಾಕೃತಿಗಳನ್ನು ಸೇರಿಸಿ ಮ್ಯೂಸಿಯಂ ಮಾಡುವ ಉದ್ದೇಶವನ್ನು ಕಲಾವಿದ ಶಿವಮೂರ್ತಿ ಹೊಂದಿದ್ದಾರೆ.
ಇದನ್ನೂ ಓದಿ: ಕಾರವಾರದ ಬೈತಖೋಲ್ ವಾಣಿಜ್ಯ ಬಂದರು ವಿಸ್ತರಣೆಗೆ ತಡೆ: ಸುಪ್ರೀಂಕೋರ್ಟ್ ಮೌಖಿಕ ಆದೇಶ