ಕಾರವಾರ: ಕೆಂಡದಂತಿರುವ ಉರಿಬಿಸಿಲಿಗೆ ಜನ-ಜಾನುವಾರುಗಳು ಕಂಗಾಲಾಗಿದ್ದಾರೆ. ಪಾರ್ಕ್ ಮಾಡಲಾಗಿದ್ದ ವಾಹನಗಳು ದಿಢೀರ್ ಬೆಂಕಿಗೆ ಆಹುತಿಯಾದ ನಿದರ್ಶನಗಳಿವೆ. ಕಳೆದ ತಿಂಗಳಷ್ಟೇ, ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಹೊತ್ತಿದ ಕಿಡಿಯೊಂದು ಸಾವಿರಾರು ಎಕರೆ ಅರಣ್ಯ ಪ್ರದೇಶವನ್ನು ಆಹುತಿ ಪಡೆದಿತ್ತು. ಈಗ ಬಿಸಿಲಿನ ತಾಪ ಮತ್ತಷ್ಟು ಏರಿಕೆಯಾಗಿದ್ದು, ಕರಾವಳಿ ಭಾಗದಲ್ಲಿ ಕಾಡ್ಗಿಚ್ಚಿನ ಭೀತಿ ಎದುರಾಗಿದೆ.
ಬಂಡೀಪುರ ಅಭಯಾರಣ್ಯದಲ್ಲಿ ಕಾಣಿಸಿಕೊಂಡಿದ್ದ ಭಾರಿ ಪ್ರಮಾಣದ ಕಾಡ್ಗಿಚ್ಚು ಸಾವಿರಾರು ಎಕರೆ ಅರಣ್ಯ ಪ್ರದೇಶವನ್ನು ನಿರ್ನಾಮ ಮಾಡಿತ್ತು. ಅಷ್ಟೇ ಅಲ್ಲ, ಬೆಂಕಿಯ ಕೆನ್ನಾಲಿಗೆಗೆ ವನ್ಯಮೃಗಗಳೂ ಪ್ರಾಣ ಕಳೆದುಕೊಂಡಿದ್ವು. ಸದ್ಯ ಎಲ್ಲೆಡೆ ಬಿಸಿಲಿನ ಪ್ರಖರತೆ ಜೋರಾಗಿದ್ದು, ಸೂರ್ಯನಿಗೆ ಮೈಯೊಡ್ಡಿ ಬದುಕಲಾಗದ ಪರಿಸ್ಥಿತಿ ಇದೆ. ಅದ್ರಲ್ಲೂ, ಕರಾವಳಿಯಾದ್ಯಂತ ಕಳೆದೆರಡು ತಿಂಗಳಿಂದ ಅಬ್ಬಾ, ಸೂರ್ಯನ ತಾಪಕ್ಕೆ ಜನ ಬಸವಳಿದಿದ್ದರೆ, ಇಲ್ಲಿನ ಬಹುತೇಕ ಅರಣ್ಯ ಪ್ರದೇಶಗಳಲ್ಲಿ ಗಿಡಮರಗಳು ಒಣಗಿ ನಿಂತಿವೆ. ಹೀಗಾಗಿ ಕಾಡ್ಗಿಚ್ಚಿನ ಆತಂಕ ಮನೆ ಮಾಡಿದೆ.
ತಿಂಗಳ ಹಿಂದಷ್ಟೇ, ಕಾರವಾರದ ಬಿಣಗಾ ಬಳಿ ಗುಡ್ಡಕ್ಕೆ ಬೆಂಕಿ ಹೊತ್ತಿಕೊಂಡು ಸುಮಾರು 5 ಎಕರೆ ಅರಣ್ಯ ಪ್ರದೇಶ ಸುಟ್ಟು ಹೋಗಿತ್ತು. ವಾರದ ಹಿಂದೆ ನಗರದ ಬೈತಖೋಲ್ ಬಂದರು ಬಳಿ ಅಗ್ನಿಯ ಕೆನ್ನಾಲಿಗೆ ಸುಮಾರು ನಾಲ್ಕೈದು ಎಕರೆಯಷ್ಟು ಕಾಡು ಪ್ರದೇಶವನ್ನು ಆಹುತಿ ಪಡೆದಿದೆ. ಬಳಿಕ ಅಗ್ನಿಶಾಮಕ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಸ್ಥಳೀಯರೂ ಸೇರಿ ಬೆಂಕಿ ನಂದಿಸಿ ಸಂಭವಿಸಬಹುದಾದ ಹೆಚ್ಚಿನ ಅನಾಹುತ ತಡೆದಿದ್ದರು.
ಕರಾವಳಿ ಜನತೆಗೆ ಬಿರು ಬೇಸಿಗೆಯ ಧಗೆ ಒಂದೆಡೆಯಾದ್ರೆ, ಅರಣ್ಯ ಪ್ರದೇಶಗಳಿಗೆ ಬೆಂಕಿ ತಗುಲುವ ಭಯ ಅವರನ್ನು ಕಾಡುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮಗಳನ್ನ ಕೈಗೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಿದೆ.