ಕಾರವಾರ: ರಾಜ್ಯದಲ್ಲಿ ಕೊರೊನಾ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟಿ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಹಲವೆಡೆ ಕೊರೊನಾ ಸೆಂಟರ್‌ಗಳನ್ನು ತೆರೆಯಲಾಗಿದೆ. ಕೊರೊನಾ ರೋಗಿಗಳ ಗಂಭೀರತೆ ಅರಿಯಲು ವಿವಿಧ ಟೆಸ್ಟ್‌ಗಳ ಜತೆ ಸಿಟಿ ಸ್ಕ್ಯಾನ್ ಕೂಡ ನಡೆಸಿ ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತಿದೆ. ಆದರೆ, ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಏಕೈಕ ಸಿಟಿ ಸ್ಕ್ಯಾನ್ ಸೌಲಭ್ಯ ಇದ್ದು, ಜನರು ಸ್ಕ್ಯಾನ್‌ಗಾಗಿ ಹೊರ ಜಿಲ್ಲೆ, ರಾಜ್ಯವನ್ನು ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಹೌದು, ರಾಜ್ಯದ ಅತಿ ವಿಸ್ತಾರವಾದ ಜಿಲ್ಲೆ ಎಂದು ಗುರುತಿಸಿಕೊಂಡಿರುವ ಉತ್ತರ ಕನ್ನಡದಲ್ಲಿ ಸಿಟಿ ಸ್ಕ್ಯಾನ್ ಸೌಲಭ್ಯದ ಕೊರತೆ ಭಾರೀ ಕಾಡುತ್ತಿದೆ. ಪ್ರಸ್ತುತ ಜಿಲ್ಲಾ ಕೇಂದ್ರ ಕಾರವಾರ ಮೆಡಿಕಲ್ ಕಾಲೇಜು ಹೊರತುಪಡಿಸಿ ಜಿಲ್ಲೆಯ ಬೇರೆ ಯಾವುದೇ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಇಲ್ಲ. ಇನ್ನು ಹೊನ್ನಾವರ, ಕುಮಟಾ, ಶಿರಸಿಯಲ್ಲಿ ಖಾಸಗಿ ಸಿಟಿ ಸ್ಕ್ಯಾನ್ ಇದ್ದು, ದುಬಾರಿ ವೆಚ್ಚ ಭರಿಸಿ ಸೌಲಭ್ಯ ಪಡೆಯಬೇಕಾದ ಸ್ಥಿತಿ ಇದೆ. ಉಳಿದಂತೆ ಜಿಲ್ಲೆಯ 8 ತಾಲೂಕುಗಳಲ್ಲಿ ಸಿಟಿ ಸ್ಕ್ಯಾನ್ ಸೌಲಭ್ಯಗಳೇ ಇಲ್ಲ. ಬೃಹತ್ ನಗರವಾಗಿರುವ ಭಟ್ಕಳದಲ್ಲಿಯೂ ಸಿಟಿ ಸ್ಕ್ಯಾನ್ ಬೇಕಾದಲ್ಲಿ ಹೊನ್ನಾವರದ ಖಾಸಗಿ ಸಿಟಿ ಸ್ಕ್ಯಾನ್ ಸೆಂಟರ್ ಇಲ್ಲವೇ ಉಡುಪಿ ಜಿಲ್ಲೆಗೆ ತೆರಳಬೇಕು.
ರೋಗಿ ಎಷ್ಟೆ ಗಂಭೀರ ಸ್ಥಿಯಲ್ಲಿದ್ದರೂ ನೂರಾರು ಕಿ.ಮೀ. ಕರೆದುಕೊಂಡು ಹೋಗಿ ಸ್ಕ್ಯಾನ್ ಮಾಡಿಸಬೇಕಾದ ಸ್ಥಿತಿ ಇದೆ. ಪ್ರಸ್ತುತ ಕೊರೊನಾದಿಂದಾಗಿ ಹಲವರಿಗೆ ನ್ಯುಮೋನಿಯಾ ಸಮಸ್ಯೆ, ಆರ್‌ಟಿಪಿಸಿಆರ್ ಟೆಸ್ಟ್ ನಡೆಸಿದಾಗ ನೆಗೆಟಿವ್ ಬಂದಾಗ ಕೊರೊನಾ ಲಕ್ಷಣಗಳಿದ್ದವರಿಗೆ ಸಿಟಿ ಸ್ಕ್ಯಾನ್ಗೆ ಸೂಚಿಸಲಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಲಭ್ಯವಿರುವ ಸಿಟಿ ಸ್ಕ್ಯಾನ್‌ನಲ್ಲಿ ಕೂಡ ಹಲವಾರು ಬಾರಿ ತಾಂತ್ರಿಕ ದೋಷ, ಸಿಬ್ಬಂದಿ ಕೊರತೆ, ಹೆಚ್ಚಿನ ಕ್ಯೂನಿಂದಾಗಿ ಜನರಿಂದ ಸೌಲಭ್ಯ ದೊರೆಯದಂತಾಗುತ್ತಿದ್ದು, ಹೊರ ಜಿಲ್ಲೆ ಉಡುಪಿ, ಮಂಗಳೂರು ಅಥವಾ ಹೊರ ರಾಜ್ಯ ಗೋವಾವನ್ನು ಅವಲಂಬಿಸಬೇಕಾದ ಸ್ಥಿತಿಯಿದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯ ನಿವಾಸಿ ದೇವರಾಜ್.
ಇನ್ನು ಈ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರನ್ನು ಕೇಳಿದ್ರೆ, ಸದ್ಯದ ಸ್ಥಿತಿಯಲ್ಲಿ ಸಿಟಿ ಸ್ಕ್ಯಾನ್ ಹೆಚ್ಚಿನ ಅಗತ್ಯವಿಲ್ಲ. ಆರ್‌ಟಿಪಿಸಿಆರ್ ರಿಪೋರ್ಟ್‌ನಲ್ಲಿ ನೆಗೆಟಿವ್ ಬಂದು, ಕೋವಿಡ್ ಲಕ್ಷಣಗಳಿದ್ದರೆ ಮಾತ್ರ ಸಿಟಿ ಸ್ಕ್ಯಾನ್ ಅಗತ್ಯ. ಇದು ಡಯಾಗ್ನೋಸ್ಟಿಕ್ ಟೂಲ್ ವರದಿಯಲ್ಲಿ ಕಾಣದೆ ಕೊರೊನಾ ಲಕ್ಷಣಗಳಿದ್ದರೆ ಸರಕಾರದ ನಿಯಮದ ಪ್ರಕಾರ, ಕೊರೊನಾ ರೋಗಿಯಂತೇ ಚಿಕಿತ್ಸೆ ನೀಡಲಾಗುತ್ತದೆ. ಪ್ರಸ್ತುತ ಸಿಟಿ ಸ್ಕ್ಯಾನ್ ಅಗತ್ಯವೇ ಇಲ್ಲ ಎನ್ನುತ್ತಾರೆ.
ಇದನ್ನೂ ಓದಿ : ಬಾಲಕಿ ಮೇಲಿನ ಅತ್ಯಾಚಾರ ಕೇಸ್: ಅಪರಾಧಿಗೆ 20 ವರ್ಷ ಕಠಿಣ ಸಜೆ, ದಂಡ