ಕಾರವಾರ : ಭಾರತೀಯ ಮಕ್ಕಳ ಕಲ್ಯಾಣ ಮಂಡಳಿಯ ಮಕ್ಕಳ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಹೊನ್ನಾವರ ತಾಲೂಕಿನ ನವಿಲಗೋಣದ ಬಾಲಕಿ ಆರತಿ ಶೇಟ್ ಆಯ್ಕೆಯಾಗಿದ್ದಾಳೆ.
ಫೆಬ್ರವರಿ 13, 2018ರಂದು ಆರತಿ ತನ್ನ ತಮ್ಮನನ್ನು ಸೈಕಲ್ ಮೇಲೆ ಕೂರಿಸಿ ಮನೆಯ ಅಂಗಳದಲ್ಲಿ ಆಟವಾಡಿಸುತ್ತಿದ್ದಳು. ಈ ವೇಳೆ ಮನೆಯ ಹಸುವೊಂದು ಓಡಿ ಬಂದು ಕೆಂಪು ಅಂಗಿ ಧರಿಸಿದ್ದ ತಮ್ಮನನ್ನು ಕೊಂಬಿನಿಂದ ತಿವಿಯಲು ಮುಂದಾಗಿತ್ತು. ಆಗ ತಮ್ಮನನ್ನು ಎತ್ತಿಕೊಂಡ ಆರತಿ, ತನ್ನ ಬೆನ್ನನ್ನು ಆಕಳ ಮುಖಕ್ಕೆ ಹಿಡಿದು ತಮ್ಮನನ್ನು ಹಸುವಿನಿಂದ ರಕ್ಷಿಸಿದ್ದಳು. ಈ ಘಟನೆ ಮನೆಯ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಬಳಿಕ ಮಾಧ್ಯಮದಲ್ಲಿ ಸುದ್ದಿ ಪ್ರಕಟವಾಗಿ ರಾಜ್ಯದಾದ್ಯಂತ ಬಾಲಕಿ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ನಂತರ 2019ರಲ್ಲಿ ಕೇಂದ್ರ ಮಕ್ಕಳ ಕಲ್ಯಾಣ ಇಲಾಖೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು. ಈಗ ರಾಷ್ಟ್ರಮಟ್ಟದಲ್ಲಿ ಈಕೆಯ ಎದೆಗಾರಿಕೆಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ದೊರೆತಿದೆ. ಈ ಪುಟ್ಟ ಬಾಲಕಿ ಕಿರಣ್ ಪಾಂಡುರಂಗ ಶೇಟ್ ಎಂಬುವರ ಪುತ್ರಿಯಾಗಿದ್ದು, ಇಡೀ ರಾಜ್ಯಕ್ಕೆ ಹೆಸರು ತಂದಿರುವುದು ಹೆಮ್ಮೆಯ ವಿಷಯ.