ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮುಂಡಗೋಡಿನ ಚಿಗಳ್ಳಿ ಚೆಕ್ ಡ್ಯಾಮ್ ಒಡೆದಿದ್ದು, ಡ್ಯಾಮ್ನ ಕೆಳ ಪ್ರದೇಶದ 5000 ಎಕರೆ ಕೃಷಿ ಭೂಮಿ ಮುಳುಗಡೆ ಆಗುವ ಭೀತಿ ಹೆಚ್ಚಿದೆ.
ತುಂಬಾ ಹಳೆಯದಾದ ಚಿಗಳ್ಳಿ ಡ್ಯಾಮ್ 2009 ರಲ್ಲೂ ಒಡೆದಿತ್ತು. ಈಗ ಎರಡನೇ ಬಾರಿ ಒಡೆದಿದ್ದು, ಚಿಗಳ್ಳಿ, ಕಡಗಿನವಾಡ ಗ್ರಾಮ ಸೇರಿದಂತೆ ಎರಡು ಹಳ್ಳಿಗಳು ಮುಳುಗಡೆ ಆಗುವ ಸಾಧ್ಯತೆಯಿದೆ. ತಹಶಿಲ್ದಾರ್ ಸೇರಿದಂತೆ ರಕ್ಷಣಾ ತಂಡಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಹಳ್ಳಿಯ ಜನರಿಗೆ ಸುರಕ್ಷಿತ ಜಾಗಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.
ಈ ಕುರಿತು ಮಾತನಾಡಿರುವ ಜಿಲ್ಲಾಧಿಕಾರಿ ಡಾ.ಹರೀಶ್, ಜನಪ್ರದೇಶಕ್ಕೆ ಯಾವುದೇ ತೊಂದರೆ ಇಲ್ಲ. ಕೃಷಿ ಭೂಮಿ ಮುಳುಗಡೆ ಆಗಲಿದೆ. ತಕ್ಷಣ ಕ್ರಮಕ್ಕೆ ಸೂಚನೆ ನೀಡಲಾಗಿದೆ. ರಕ್ಷಣಾ ತಂಡಗಳು ಸಹ ಸುತ್ತಮುತ್ತ ಇರುವುದರಿಂದ ಯಾವುದೇ ತೊಂದರೆಗಳಿಲ್ಲ ಎಂದು ತಿಳಿಸಿದ್ದಾರೆ.