ಕಾರವಾರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡು ಗ್ರಾಮದಲ್ಲಿ, ಕಳೆದ ಐದು ವರ್ಷಗಳಿಂದ ಆಲೆಮನೆಯನ್ನು ಒಂದು ಹಬ್ಬವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಗ್ರಾಮೀಣ ಸೊಗಡಿನ ಆಲೆಮನೆ ಸಂಪ್ರದಾಯವನ್ನ ಜನರಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಆಲೆಮನೆ ಹಬ್ಬವನ್ನು ಆಯೋಜಿಸಲಾಗುತ್ತದೆ.
ಮಾಗೋಡು ಗ್ರಾಮಸ್ಥರು ಕಳೆದ ಐದು ವರ್ಷದಿಂದ ಆಲೆಮನೆ ಹಬ್ಬವನ್ನ ಆಚರಣೆ ಮಾಡುತ್ತಿದ್ದಾರೆ. ಆಲೆಮನೆಯಿಂದ ಆಗುವ ಉಪಯೋಗಗಳು ಏನು, ಇದರಿಂದ ಎಷ್ಟು ಆರೋಗ್ಯಕರ ಬೆಲ್ಲವನ್ನ ತೆಗೆಯಬಹುದು. ಕಬ್ಬಿನ ಸವಿಯಿಂದ ಎಷ್ಟು ತರಹದ ಖಾದ್ಯಗಳನ್ನ ತಯಾರಿಸಬಹುದು ಎಂದು ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಜೊತೆಗೆ ಆಲೆಮನೆ ಹಬ್ಬವನ್ನ ಆಯೋಜಿಸುವ ಮೂಲಕ ಜಿಲ್ಲೆಯಾದ್ಯಂತ ಜನರನ್ನ ಸೇರಿಸಿ ಅರಿವು ಮೂಡಿಸುತ್ತಿದ್ದಾರೆ.
ಹಬ್ಬದೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಮನರಂಜನೆ ಮಹಾಪೂರವೇ ಹರಿಸಿದ್ದಾರೆ. ಈ ಮೂಲಕ ಆಲೆಮನೆ ಸಂಪ್ರದಾಯವನ್ನ ಜನರಿಗೆ ತಿಳಿಸಿಕೊಡುವುದರ ಜೊತೆಗೆ ಕಬ್ಬಿನ ಹಾಲು, ಅದರಿಂದ ತೆಗೆದ ಬೆಲ್ಲದ ಸವಿಯನ್ನ ಜನರಿಗೆ ಉಣಬಡಿಸಿಕೊಂಡು ಬರುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಉತ್ತಮ ರೀತಿಯಲ್ಲಿ ಈ ಹಬ್ಬ ನಡೆದುಕೊಂಡು ಬರುತ್ತಿದೆ.
ಇದನ್ನೂ ಓದಿ: ತುಂಗಾ ಮೇಲ್ದಂಡೆ ಯೋಜನೆ: ಕಾಲುವೆ ಸರಿಪಡಿಸಲು ರೈತರ ಆಗ್ರಹ
ಈ ಆಲೆಮನೆ ಹಬ್ಬದಲ್ಲಿ ಸುಮಾರು ಐದು ಸಾವಿರಕ್ಕೂ ಅಧಿಕ ಜನ ಭಾಗಿಯಾಗಿ ರುಚಿ ರುಚಿಯಾದ ಕಬ್ಬಿನ ನೊರೆಹಾಲನ್ನ ಸವಿದರು. ಅಂದಾಜು 8 ಟನ್‌ನಷ್ಟು ಕಬ್ಬನ್ನ ನುರಿಸಲಾಗಿದೆ. ಜೊತೆಗೆ ಮಿರ್ಚಿ, ಮಂಡಕ್ಕಿ, ಖಾರ, ಪಾಪಡೆ ಸೇರಿ ಹಲವು ಬಗೆಯ ತಿಂಡಿಗಳನ್ನ ಬಂದ ಜನರಿಗೆ ಉಚಿತವಾಗಿ ವಿತರಿಸಲಾಯಿತು.
ಕಬ್ಬಿನಿಂದ ತಯಾರಾದ ತೊಡೆದೇವು ಬೆಲ್ಲ, ಕಾಕಂಬಿ ಬೆಲ್ಲ, ಜೋನಿ ಬೆಲ್ಲ ಹೀಗೆ ಹಲವು ರೀತಿಯ ಆರೋಗ್ಯಕರ ಬೆಲ್ಲವನ್ನ ರೈತರು ಮಾರಾಟ ಮಾಡಲು ಅವಕಾಶ ನೀಡಲಾಗಿತ್ತು. ಹಬ್ಬದ ಜೊತೆಗೆ ಗೋಪಾಲನೆ, ಪೋಷಣೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನ ಸಹ ಸಂಯೋಜನೆ ಮಾಡಲಾಗಿತ್ತು.