ಶಿರಸಿ (ಉತ್ತರ ಕನ್ನಡ) : ನಕಲಿ ಅಂಕಪಟ್ಟಿ ಸೃಷ್ಟಿಸಿ ಅಂಚೆ ಇಲಾಖೆಯಲ್ಲಿ ಹುದ್ದೆ ಪಡೆದು ವಂಚನೆ ಮಾಡಿದ ಕುರಿತು ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಹೊಸ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರಸಿಯ ಅಂಚೆ ಕಚೇರಿಯಲ್ಲಿ ಗ್ರಾಮೀಣ ಅಂಚೆ ಸೇವಕ ಹುದ್ದೆ ಪಡೆದ 14 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಎಲ್ಲರೂ ಸಹ 2023ರಲ್ಲಿ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿದ್ದರು. ಮಾರ್ಚ್ 2023ರಲ್ಲಿ ನಕಲಿ ಅಂಕಪಟ್ಟಿ ಸಲ್ಲಿಸಿ ಹುದ್ದೆ ಪಡೆದಿದ್ದರು ಎನ್ನಲಾಗಿದೆ.
ಅಂಚೆ ಇಲಾಖೆಯಲ್ಲಿದ್ದ ಮೋಹನ ರುಕ್ಯಾ ನಾಯಕ್ (24), ಹನುಮಂತ ಭೀಮಪ್ಪ ಮದಿಹಳ್ಳಿ, (21), ವಿಠಲ ಬಸಪ್ಪ ಹೊಸೂರ (31), ದುಂಡಪ್ಪ ರಾಮಪ್ಪ ಆಶಿರೋಟಿ, (23), ಶರಣ್ ಕುಮಾರ್ ಮೋತಿಲಾಲ್ (26), ಸುರೇಶ ಶಿವಪ್ಪ, ಕುಡಗಿ (28), ಅಮೃತಾ ಅರವಿಂದಬಾಬು ನಾಯಕ (25), ಸಚಿನ ಮಾರುತಿ ಭಜಂತ್ರಿ (27), ಮಮಿತಾ ಬಾಬು ರಾಥೋಡ್ (29), ಸತೀಶ ಮೋತಿಲಾಲ್ ಪವಾರ (31), ಆಕಾಶ್ ಶ್ರೀನಿವಾಸ ಭಜಂತ್ರಿ, (26), ಮೋಹನ್ ನಾಮದೇವ ಚವಾಣ್ (31), ದಿಲೀಪ್ ಧನಸಿಂಗ್ ಪವಾರ, (28) ಹಾಗೂ ರವಿ ಮಹಾದೇವಪ್ಪ ದಡ್ಡಿ, (26) ಆರೋಪಿಗಳಾಗಿದ್ದಾರೆ.
ಅಂಕಪಟ್ಟಿಯ ಸತ್ಯಾಸತ್ಯತೆ ಪರಿಶೀಲಿಸಿದಾಗ ವಂಚನೆ ಬಯಲಾಗಿದ್ದು, ಶಿರಸಿ ಅಂಚೆ ನಿರೀಕ್ಷಕರು ಪ್ರಕರಣ ದಾಖಲಿಸಿದ್ದಾರೆ. ಪಿಎಸ್ಐ ರತ್ನ ಕುರಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಆರೂವರೆ ಸಾವಿರಕ್ಕೂ ಅಧಿಕ ಅಂಕಪಟ್ಟಿಗಳು ಜಪ್ತಿ (ಪ್ರತ್ಯೇಕ ಪ್ರಕರಣ) : ನಕಲಿ ಅಂಕಪಟ್ಟಿ ಜಾಲ ರಾಜಧಾನಿಯಲ್ಲಿ ನಾಯಿಕೊಡೆಯಂತೆ ಬೆಳೆದು ಕೊಂಡಿದೆ. ಅಲ್ಲಲ್ಲಿ ರಾಜ್ಯ ಹಾಗೂ ಅಂತರ ರಾಜ್ಯದ ವಿಶ್ವ ವಿದ್ಯಾಲಯಗಳ ಅಂಕಪಟ್ಟಿಗಳು ಸಾರಾಸಗಟಾಗಿ ಸಿಗುತ್ತಿದೆ. ಈ ಹಿಂದೆ ಡಿಸೆಂಬರ್ನಲ್ಲಿ ಬೆಂಗಳೂರಿನ ಪೊಲೀಸ್ ಪಡೆ ವೆಂಕಟೇಶ್ವರ ಇನ್ಸಿಟಿಟ್ಯೂಟ್ ಸಂಸ್ಥೆಯ ಮೇಲೆ ದಾಳಿ ಮಾಡಿ ನಾಲ್ವರನ್ನು ಬಂಧಿಸಿದ್ದರು. ರಾಜ್ಯ, ಹೊರರಾಜ್ಯದ ವಿವಿಧ ಯೂನಿವರ್ಸಿಟಿಗಳ ವಿವಿಧ ಕೋರ್ಸುಗಳ ನಕಲಿ ಅಂಕಪಟ್ಟಿ ನೀಡುತ್ತಿದ್ದ ಐದು ಸಂಸ್ಥೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ (ಜನವರಿ -27-23) ನಡೆಸಿದ್ದರು.
ಎಜುಕೇಶನ್ ಕನ್ಸಲ್ಟೆನ್ಸಿ ಹೆಸರಿನಲ್ಲಿ ನಕಲಿ ಅಂಕಪಟ್ಟಿ ನೀಡುತ್ತಿದ್ದ ರಾಜಾಜಿ ನಗರದ ಕ್ವೆಸ್ಟ್ ಟೆಕ್ನಾಲಜೀಸ್, ಜೆ.ಪಿ.ನಗರದ ಸಿಸ್ಟಂ ಕ್ವೆಸ್ಟ್, ಭದ್ರಪ್ಪ ಲೇಔಟಿನ ಆರೋಹಿ ಇನ್ಸಿಟಿಟ್ಯೂಟ್, ದಾಸರಹಳ್ಳಿಯ ವಿಶ್ವಜ್ಯೋತಿ ಕಾಲೇಜ್ ಹಾಗೂ ವಿಜಯನಗರದ ಬೆನಕಾ ಕರೆಸ್ಪಾಡೆನ್ಸ್ ಕಾಲೇಜ್ ಮೇಲೆ ದಾಳಿ ನಡೆಸಲಾಗಿದ್ದು, ವಿಕಾಸ್ ಭಾಗವತ್ ಎಂಬಾತನನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ನಕಲಿ ಅಂಕಪಟ್ಟಿ ಜಾಲದ ವಿರುದ್ಧ ಸಿಸಿಬಿ ಸಮರ; ಆರೂವರೆ ಸಾವಿರಕ್ಕೂ ಅಧಿಕ ಅಂಕಪಟ್ಟಿಗಳು ಜಪ್ತಿ