ಕಾರವಾರ: ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗುತ್ತಿದ್ದ ಬೋಟ್ನಲ್ಲಿದ್ದ 6 ಮಂದಿ ಮೀನುಗಾರರನ್ನು ಇತರ ಬೋಟ್ನಲ್ಲಿದ್ದ ಮೀನುಗಾರರು ರಕ್ಷಣೆ ಮಾಡಿರುವ ಘಟನೆ ಅಂಕೋಲಾ ತಾಲೂಕಿನ ಬೇಲೆಕೇರಿ ಬಳಿ ಸಮುದ್ರದಲ್ಲಿ ನಡೆದಿದೆ.
ತದಡಿಯ ಶಂಕರ ಹರಿಕಂತ್ರ ಮಾಲೀಕತ್ವದ ಶಾಂತಿಕಾ ಪರಮೇಶ್ವರಿ ಹೆಸರಿನ ಬೋಟ್ ಮುಳುಗುವ ಹಂತದಲ್ಲಿತ್ತು. ಬೋಟ್ನಲ್ಲಿದ್ದ ಶಂಕರ ಬೀರಪ್ಪ ಹರಿಕಂತ್ರ, ಮನೋಜ್ ಶಂಕರ ಹರಿಕಂತ್ರ, ದೇವದಾಸ ನಾಗಪ್ಪ ಹರಿಕಂತ್ರ, ಮಹೇಂದ್ರ ಶಂಕರ ನಾಯ್ಕ, ಬೀರು ಹನುಮಂತ ಗೌಡಾ ಹಾಗೂ ಬೀರಾ ಮಾಸ್ತಿ ಗೌಡ ರಕ್ಷಣೆಗೊಳಗಾದ ಮೀನುಗಾರರು.
ಗುರುವಾರ ಸಂಜೆ ವೇಳೆ ಬೋಟ್ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದು, ಈ ವೇಳೆ ಅಲೆಗಳ ಅಬ್ಬರ ಹೆಚ್ಚಿದ್ದ ಪರಿಣಾಮ ಬೋಟ್ಗೆ ಹಾನಿಯಾಗಿ ನೀರು ತುಂಬಿಕೊಳ್ಳಲು ಪ್ರಾರಂಭಿಸಿತ್ತು. ಕೂಡಲೇ ಬೋಟ್‌ನಲ್ಲಿದ್ದವರು ರಕ್ಷಣೆಗೆ ಮನವಿ ಮಾಡಿದ್ದು, ಈ ವೇಳೆ, ಹತ್ತಿರದಲ್ಲಿದ್ದ ದೇವಿಕೃಪಾ ಹೆಸರಿನ ಬೋಟ್ನವರು ಮುಳುಗುತ್ತಿದ್ದ ಬೋಟ್ನಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಿ ಮುದಗ ಬಂದರಿಗೆ ಕರೆ ತಂದಿದ್ದಾರೆ.
ಈ ವೇಳೆ, ಸ್ಥಳಕ್ಕೆ ಉತ್ತರ ಕನ್ನಡ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ, ಕರಾವಳಿ ಕಾವಲು ಪಡೆಯ ಸಿಪಿಐ ನಿಶ್ಚಲ ಕುಮಾರ, ಮೀನುಗಾರಿಕೆ ಸಹಾಯಕ ಅಧಿಕಾರಿ ವಿದ್ಯಾಧರ ಹರಿಕಂತ್ರ ಭೇಟಿ ನೀಡಿ ಮೀನುಗಾರರಿಗೆ ಅಗತ್ಯ ನೆರವು ನೀಡಿದ್ದಾರೆ.
ಇದನ್ನೂ ಒದಿ: ಮನವಿ ಪತ್ರ ಹಿಡಿದು ಶಬರಿಯಂತೆ ಕಾದ ವೃದ್ಧೆಯ ಮೊಗದಲ್ಲಿ ನಗು ಅರಳಿಸಿದ ಬೊಮ್ಮಾಯಿ