ಭಟ್ಕಳ: ಮಹಿಳೆಯ ಗರ್ಭಕೋಶದಲ್ಲಿದ್ದ ಬೃಹದಾಕಾರದ ಗಡ್ಡೆಯ ಜೊತೆ ಗರ್ಭಕೋಶವನ್ನೂ ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದು ಭಟ್ಕಳದ ಜಿಲ್ಲಾಸ್ಪತ್ರೆ ವೈದ್ಯರು ಮಹಿಳೆಯನ್ನ ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಹೆಬಳೆಯ ಗಾಂಧಿನಗರದ ನಿವಾಸಿಯಾದ ಕುಸುಮಾ ಮೋಗೇರ ಎಂಬ ಮಹಿಳೆ ಕಳೆದ 15 ದಿನದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಮಹಳೆಯನ್ನ ಸರ್ಕಾರಿ ಆಸ್ಪತ್ರೆಗೆ ಕರೆ ತಂದ ಕುಟುಂಬದವರು ವೈದ್ಯೆ ಶಮ್ಸನೂರ್ ಅವರ ಬಳಿ ತಪಾಸಣೆ ಮಾಡಿಸಿದ್ದಾರೆ. ಈ ವೇಳೆ ತಪಾಸಣೆಯಲ್ಲಿ ಗರ್ಭಕೋಶದಲ್ಲಿ ಗಡ್ಡೆ ಇರುವುದು ತಿಳಿದು ಬಂದಿದೆ. ಮಹಿಳೆಗೆ ಹೊಟ್ಟೆ ನೋವು ಜಾಸ್ತಿಯಾಗಿ ಹೊಟ್ಟೆ ದಪ್ಪ ಆಗಿರುವುದರಿಂದ ವೈದ್ಯರು ಶಸ್ತ್ರಚಿಕಿತ್ಸೆ ಮಾಡಬೇಕೆಂದು ಸೂಚಿಸಿದ್ದಾರೆ.
ಬಳಿಕ ಅರವಳಿಕೆ ತಜ್ಞೆ ಡಾ.ಸವಿತಾ ಕಾಮತ್ ಹಾಗೂ ಸ್ತ್ರೀರೋಗ ತಜ್ಞೆ ಡಾ.ಶಮ್ಸನೂರ್ ಅವರ ನೇತೃತ್ವದಲ್ಲಿ ಸತತ 4 ಗಂಟೆಗೂ ಅಧಿಕ ಕಾಲ ಶಸ್ತ್ರಚಿಕಿತ್ಸೆ ನಡೆಸಿ,ಮಹಿಳೆಯ ಗರ್ಭಕೋಶದಲ್ಲಿದ್ದ ಸುಮಾರು 20-22 ಸೆಂ.ಮೀ. ಉದ್ದಗಲದ ಗಡ್ಡೆಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ಯಂತ ಕ್ಲಿಷ್ಟಕರ ಸ್ಥಿತಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ, ಜೀವ ಉಳಿಸಿದ ವೈದ್ಯರಿಗೆ ಮಹಿಳೆ ಹಾಗೂ ಕುಟುಂಬಸ್ಥರು ಕೃತಜ್ಞತೆ ತಿಳಿಸಿದ್ದಾರೆ.
ಒಂದು ತಿಂಗಳಲ್ಲಿ ಮೂರನೇ ಗಡ್ಡೆ ಶಸ್ತ್ರಚಿಕಿತ್ಸೆ ಮಾಡಿದ ಜಿಲ್ಲಾಸ್ಪತ್ರೆ ವೈದ್ಯರು:
ಹೊಸ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಆಸ್ಪತ್ರೆಯನ್ನ ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಒಂದೇ ತಿಂಗಳಲ್ಲಿ ಮೂರು ಗಡ್ಡೆಯ ಶಸ್ತ್ರಚಿಕಿತ್ಸೆ ಮಾಡಿ ರೋಗಿಗಳ ಜೀವ ಉಳಿಸುವಲ್ಲಿ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ. ವೈದ್ಯರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.